ಪುತ್ತೂರು: ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿ ಏ. 20ರಿಂದ ಆರಂಭಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹಾಗೂ ಉಪ ವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ತಿಳಿಸಿದರು.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸಂಜೀವ ಮಠಂದೂರು, ಪುತ್ತೂರು ತಾಲೂಕಿಗೆ ಸೀಮಿತವಾಗಿ ಖಾಸಗಿ ವರ್ತಕರಿಗೆ ಎಪಿಎಂಸಿಯ ಪ್ರಾಂಗಣದಲ್ಲಿ ಅಡಿಕೆ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇಲ್ಲಿ ಅಡಿಕೆ ಖರೀದಿ ಮಾಡುವ ವರ್ತಕರು ಲಾಕ್‌ಡೌನ್ ಅಂತ್ಯವಾಗುವವರೆಗೂ ಖರೀದಿ ಮಾಡಬೇಕು. ಯಾವುದೇ ಕಾರಣಕ್ಕೂ ನಡುವೆ ನಿಲ್ಲಿಸಬಾರದು ಎಂಬ ಷರತ್ತಿನೊಂದಿಗೆ ವರ್ತಕರಿಗೆ ಈ ಅವಕಾಶ ನೀಡಲಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ವರ್ತಕರು ವಹಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾರಾಟ ಹೇಗೆ?
ಅಡಿಕೆ ಮಾರಾಟ ಮಾಡುವ ರೈತರು ಪುತ್ತೂರು ಎಪಿಎಂಸಿ ದೂರವಾಣಿ ಕರೆ ಮಾಡಬೇಕು. ಎಷ್ಟು ಕ್ವಿಂಟಾಲ್ ಅಡಿಕೆ ಮಾರಾಟಕ್ಕಿದೆ. ಯಾವ ಪ್ರದೇಶ ಎಂಬ ಮಾಹಿತಿ ನೀಡಬೇಕು. ಆ ಭಾಗದ 5ರಿಂದ 6 ರೈತರು ಒಟ್ಟಿಗೆ ಸೇರಿಕೊಂಡು ಹೆಚ್ಚು ಅಡಿಕೆ ಮಾರಾಟ ಮಾಡುವ ಯೋಜನೆ ಹಾಕಿಕೊಳ್ಳಬೇಕು. ಅಲ್ಲಿಗೆ ಪುತ್ತೂರು ಎಪಿಎಂಸಿ ವತಿಯಿಂದ ಪಿಕಪ್ ವಾಹನದ ವ್ಯವಸ್ಥೆ ಮಾಡಲಾಗುತ್ತದೆ. ವಾಹನಕ್ಕೆ ಕಡಿಮೆ ದರದ ಬಾಡಿಗೆಯನ್ನು ರೈತರೇ ಭರಿಸಬೇಕು. ಬೆಳಿಗ್ಗೆ 7ರಿಂದ 12 ಗಂಟೆಯ ತನಕ ಮಾತ್ರ ಅಡಿಕೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇದರ ಜೊತೆಗೆ ಗೇರು ಬೀಜ, ಕಾಳುಮೆಣಸು ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡಲೂ ಅವಕಾಶ ನೀಡಲಾಗಿದೆ ಎಂದರು.
ಎಪಿಎಂಸಿ ಪ್ರಾಂಗಣದಲ್ಲಿ ಅಡಿಕೆ ಮಾರಾಟ ಮಾಡಿದ ನಂತರ ಎಪಿಎಂಸಿ ವತಿಯಿಂದ ದಾಖಲೆಯನ್ನು ರೈತರು ಪಡೆದುಕೊಳ್ಳಬೇಕು. ಪುತ್ತೂರು ಎಪಿಎಂಸಿ ಪ್ರಾಂಗಣದಲ್ಲಿರುವ ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರದಲ್ಲೂ ರೈತರು ಮಾರಾಟ ಮಾಡಬಹುದು ಎಂದು ಶಾಸಕರು ತಿಳಿಸಿದರು.
ರೈತರ ವಸ್ತುಗಳ ಮಾರಾಟಕ್ಕೆ ಯಾವುದೇ ನಿರ್ಬಂಧ ಇಲ್ಲದಿದ್ದರೂ ಲಾಕ್‌ಡೌನ್ ಹಿನ್ನಲೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ತೊಂದರೆಯಾಗದಂತೆ ರೈತರು ಎಚ್ಚರಿಕೆ ವಹಿಸಬೇಕು. ಖಾಸಗಿ ವಾಹನಗಳಲ್ಲಿ ಅಡಿಕೆ ತರುವ ಕೆಲಸ ಮಾಡಬಾರದು. ಎಪಿಂಎಸಿ ಪ್ರಾಂಗಣಕ್ಕೆ ಅಡಕೆ ತರುವ ರೈತರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಪೊಲೀಸರಿಗೂ ಸೂಚನೆ ನೀಡಲಾಗಿದೆ ಎಂದರು.
ರೈತರ ನೆರವಿಗಾಗಿ ಎಪಿಎಂಸಿಯ ದೂರವಾಣಿ ನಂಬರ್ 08251-230434ಕ್ಕೆ ಕರೆ ಮಾಡಬಹುದು ಅಥವಾ ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ಅವರ ಮೊಬೈಲ್ ಸಂಖ್ಯೆ 944963910, ಅಧ್ಯಕ್ಷ ದಿನೇಶ್ ಮೆದು ಅವರ ಮೊಬೈಲ್ ಸಂಖ್ಯೆ 9008890045ಕ್ಕೆ ಕರೆ ಮಾಡಬಹುದಾಗಿದೆ ಎಂದರು.