ಮಂಗಳೂರು : ಸುರತ್ಕಲ್ ಹಾಗೂ ಹೆಜಮಾಡಿ ಟೋಲ್‌ಗೇಟ್‌ಗಳನ್ನ ವಿಲೀನಗೊಳಿಸಬೇಕೆಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಮುಖ್ಯಸ್ಥ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.
ಹೆಜಮಾಡಿ ಟೋಲ್‌ಗೇಟ್ ಕಾರ್ಯಾರಂಭದ ಬಳಿಕ ತೆರವುಗೊಳಿಸುವ ಷರತ್ತಿನೊಂದಿಗೆ ಆರು ವರ್ಷಗಳ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರಂಭವಾಗಿರುವ ಸುರತ್ಕಲ್ ಟೋಲ್ ಗೇಟ್, ಇನ್ನೂ ಮುಂದುವರಿಸುತ್ತಿರುವುದು ಅಕ್ರಮ ಎಂದು ಅವರು ಆರೋಪಿಸಿದ್ದಾರೆ.
ಸುರತ್ಕಲ್ ಟೋಲ್ ಕೇಂದ್ರದಿಂದ ಕೇವಲ 9 ಕಿ.ಮೀ ದೂರದ ಹೆಜಮಾಡಿಯಲ್ಲಿ ಟೋಲ್ ಕೇಂದ್ರ ಕಾರ್ಯಾರಂಭ ಮಾಡಿದೆ. ಆದರೂ, ತಾತ್ಕಾಲಿಕವಾಗಿ ನಿರ್ಮಿಸಿದ ಸುರತ್ಕಲ್ ಟೋಲ್ ಗೇಟ್ ಇನ್ನೂ ಮುಂದುವರಿಯುತ್ತಿದೆ.
ಟೋಲ್‌ಗೇಟ್ ಹೋರಾಟ ಸಮಿತಿಯ ತೀವ್ರ ಹೋರಾಟದ ಹಿನ್ನೆಲೆ, ಹೆದ್ದಾರಿ ಪ್ರಾಧಿಕಾರ 2018ರಲ್ಲಿ ಸುರತ್ಕಲ್ ಟೋಲ್‌ಗೇಟ್ ಕೇಂದ್ರವನ್ನು ಮುಚ್ಚಿ, ಹೆಜಮಾಡಿ ಟೋಲ್ ಕೇಂದ್ರದೊಂದಿಗೆ ವಿಲೀನಗೊಳಿಸುವ ನಿರ್ಧಾರ ಕೈಗೊಂಡಿತ್ತು. ಇದಕ್ಕೆ ರಾಜ್ಯ ಸರ್ಕಾರದ ಅನುಮೋದನೆಯೂ ದೊರಕಿತ್ತು. ಆದರೂ, ಟೋಲ್‌ಗೇಟ್ ವಿಲೀನ ಪ್ರಕ್ರಿಯೆ ನಡೆಯದೆ ಬಲವಂತದ ಟೋಲ್ ಸಂಗ್ರಹ ಈಗಲೂ ನಡೆಯುತ್ತಿದೆ ಎಂದು ಮನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಓದಿ : ಇಂಧನ ಬೆಲೆ ಏರಿಕೆಗೆ ಖಂಡನೆ: ಶಾಸಕ ಅಖಂಡ ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ
ಟೋಲ್‌ಗೇಟ್ ವಿಲೀನ ಪ್ರಕ್ರಿಯೆ ನಡೆಯದಿದ್ದ ಹಿನ್ನೆಲೆ, ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ತಿಂಗಳುಗಳ ಕಾಲ ಹೋರಾಟ ನಡೆಸಿತ್ತು. ಆದರೆ, ತಾಂತ್ರಿಕ ತೊಂದರೆಗಳು ನಿವಾರಣೆಯಾಗುವವರೆಗೆ ಸ್ಥಳೀಯ ವಾಹನಗಳಿಗೆ ರಿಯಾಯಿತಿ ನೀಡಿ, ಸುರತ್ಕಲ್ ಟೋಲ್ ಕೇಂದ್ರದ ಗುತ್ತಿಗೆಯ ಅವಧಿಯನ್ನೂ ವಿಸ್ತರಣೆ ಮಾಡಿ ಟೋಲ್ ಸಂಗ್ರಹ ಮುಂದುವರಿಸಲಾಗುತ್ತಿತ್ತು.
ಸರ್ಕಾರ ಫೆ.15ರಿಂದ ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಿದೆ. ಸ್ಥಳೀಯ ವಾಹನಗಳ ಉಚಿತ ಪ್ರಯಾಣವನ್ನು ರದ್ದು ಮಾಡಿದೆ. ಯಾವುದೇ ಕಾರಣಕ್ಕೂ ಅಕ್ರಮ ಸುಲಿಗೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಸುರತ್ಕಲ್ ಟೋಲ್‌ಗೇಟ್ ತಾತ್ಕಾಲಿಕವಾಗಿ ಸುಂಕ ವಸೂಲಾತಿ ಕೇಂದ್ರವಾಗಿರುವುದರಿಂದ, ಇತರ ಟೋಲ್ಗೇಟ್ಗಳಂತೆ ಈ ಟೋಲ್ ಕೇಂದ್ರವನ್ನು ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ತಕ್ಷಣ ಸುರತ್ಕಲ್ ಟೋಲ್‌ಗೇಟ್‌ನ ತೆರವುಗೊಳಿಸಿ ಹೆಜಮಾಡಿ ಟೋಲ್ಗೇಟ್ನೊಂದಿಗೆ ವಿಲೀನಗೊಳಿಸಿ ಎಂದು ಆಗ್ರಹಿಸಿದ್ದಾರೆ.