ಉಳ್ಳಾಲ: ಪಾದಚಾರಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸ್ಥಳೀಯ ಮಹಿಳೆಯರು ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು.
ಉಳ್ಳಾಲ-ಉಳಿಯಕ್ಕೆ ಸಂಪರ್ಕಿಸುವ ಉಳ್ಳಾಲ, ಬಂಡಿಕೊಟ್ಯ, ಗೊಳಿಯಡಿ ರಸ್ತೆಯಲ್ಲಿ ಮಹಿಳೆಯರು ನಡೆದುಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ರಸ್ತೆ ಬದಿಯ ಓಣಿಗಳಿಂದ ಬೈಕ್ನಲ್ಲಿ ಬರುವ ಆಗಂತುಕರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಕಳೆದ 15 ದಿನಗಳಿಂದ ಮೂರ್ನಾಲ್ಕು ಬಾರಿ ಇಂತಹ ಘಟನೆಗಳು ಬೆಳಕಿಗೆ ಬಂದಿವೆ.
ಅದರಂತೆ ಇಂದು ಕೂಡ 16ರ ಬಾಲಕನೋರ್ವ ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯನ್ನು ಚುಡಾಯಿಸುತ್ತಿದ್ದನು. ಇದನ್ನು ಕಂಡ ಸ್ಥಳೀಯರು ಬಾಲಕನನ್ನು ಉಳ್ಳಾಲ ಪೊಲೀಸರ ವಶಕ್ಕೆ ಕೊಟ್ಟಿದ್ದಾರೆ.