ಬೆಳ್ತಂಗಡಿ: ಹಥ್ರಾಸ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣ ದೇಶವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ಅಲ್ಲಿನ ಮುಖ್ಯಮಂತ್ರಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಈಗ ಉತ್ತರಪ್ರದೇಶ ಅತ್ಯಾಚಾರ ಪ್ರದೇಶವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಂಚಾಲಕ ಚಂದು ಎಲ್. ಆಕ್ರೋಶ ವ್ಯಕ್ತಪಡಿಸಿದರು.
ಹಥ್ರಾಸ್‌ನಲ್ಲಿ ದಲಿತ ಸಮುದಾಯದ ಯುವತಿಯ ಮೇಲಿನ ಹೇಯ ಕೃತ್ಯವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಮೊಂಬತ್ತಿ ಬೆಳಗಿ ಮೆರವಣಿಗೆ ಹಾಗೂ ಪ್ರತಿಭಟನೆ ನಡೆಸಲಾಯಿತು.
ನಾವೆಲ್ಲಾ ಸೈದ್ಧಾಂತಿಕ ಭಿನ್ನಾಭಿಪ್ರಾಯ ಬದಿಗಿರಿಸಿ ನಮ್ಮ ರಕ್ಷಣೆಗಾಗಿ ಒಂದಾಗಬೇಕಾದ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಚಿಕಿತ್ಸೆಗೆ ಸ್ಪಂದಿಸದೆ ಅತ್ಯಾಚಾರಕ್ಕೆ ಒಳಗಾದ ಯುವತಿ ಸಾವನ್ನಪ್ಪಿದ್ದಲ್ಲ. ಇದು ಸರ್ಕಾರಿ ಪ್ರಾಯೋಜಿತ ಕೊಲೆ. ಆಕೆಯನ್ನು ವ್ಯವಸ್ಥಿತವಾಗಿ ಕೊಲ್ಲಲಾಯಿತು ಮತ್ತು ಆರೋಪಿಗಳನ್ನು ರಕ್ಷಿಸುವ ಸಲುವಾಗಿ ರಾತೋರಾತ್ರಿ ಪೊಲೀಸರ ಮೂಲಕ ಆಕೆಯ ಶವವನ್ನು ದಹಿಸಲಾಯಿತು. ಸರ್ಕಾರವೇ ಸಾಕ್ಷ್ಯ ನಾಶ ಮಾಡಿದ್ದು, ಅತ್ಯಂತ ಹೀನ ಕೃತ್ಯ ಇದು. ಪ್ರಜಾಪ್ರಭುತ್ವದ ಮೇಲೆ, ಸಂವಿಧಾನದ ಮೇಲೆ ನಡೆದ ಅತ್ಯಾಚಾರ ಎಂದು ಸಾಮಾಜಿಕ ಚಿಂತಕ ಧಮ್ಮಾನಂದ ಹೇಳಿದರು.
ಬಸ್ ನಿಲ್ದಾಣದಿಂದ ಪ್ರತಿಭಟನಾಕಾರರು ಮಿನಿ ವಿಧಾನಸೌಧದ ಎದುರು ಸಾಂಕೇತಿಕ ಧರಣಿ ನಡೆಸಿ ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್ ಮೂಲಕ ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಸಚಿವರಿಗೆ ಮನವಿ ನೀಡಿದರು.