ಮಂಗಳೂರು : ಪೊಲೀಸರು ಬಂಧಿಸಿರುವ ಅಮಾಯಕ ಪಿಎಫ್ಐ ಕಾರ್ಯಕರ್ತರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿರುವವರ ಮೇಲೆ ನಡೆಸಿರುವ ಲಾಠಿಚಾರ್ಜ್ ಅನ್ನು ಖಂಡಿಸಿ ಅಮಾಯಕರ ಮೇಲಿನ ಕೇಸ್ ಹಿಂಪಡೆದು, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಡಿ.17ರಂದು ಮಂಗಳೂರಿನ ಎಸ್ಪಿ ಕಚೇರಿವರೆಗೆ ಮಾರ್ಚ್ ಹಮ್ಮಿಕೊಳ್ಳಲಾಗುತ್ತದೆ ಎಂದು ಪಿಎಫ್ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಪೊಲೀಸರು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಮೂರು ಮಂದಿಯನ್ನು ಅಕ್ರಮವಾಗಿ ಬಂಧಿಸಿದ್ದರು. ಬಂಧಿತರನ್ನು ಬಿಡುಗಡೆ ಮಾಡುವಂತೆ ಪ್ರತಿಭಟನಾಕಾರರು ಬೆಳಗ್ಗಿನಿಂದಲೇ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು.
ಆದರೂ ಬಂಧಿತ ಮೂವರು ಅಮಾಯಕರಲ್ಲಿ ಓರ್ವನನ್ನು ಹೊರತುಪಡಿಸಿ ಮತ್ತಿಬ್ಬರನ್ನು ಬಂಧ ಮುಕ್ತಗೊಳಿಸಿರಲಿಲ್ಲ. ಆದ್ದರಿಂದ ಪ್ರತಿಭಟನೆಯನ್ನು ಕೈಬಿಟ್ಟ ಕಾರ್ಯಕರ್ತರು ರಾತ್ರಿಯಾದರೂ ಸಂಯಮ ಕಳೆದುಕೊಳ್ಳದೆ ಮತ್ತೆ ಪ್ರತಿಭಟನೆ ನಡೆಸಿದ್ದಾರೆ.
ಆದರೆ, ಪೊಲೀಸರು ರಾತ್ರಿ 9:30ರ ವೇಳೆಗೆ ಹಿಂಬದಿಯಿಂದ ಬಂದು ಏಕಾಏಕಿ ಲಾಠಿಚಾರ್ಜ್ ಮಾಡಿದ್ದಾರೆ. ಈ ಲಾಠಿಚಾರ್ಜ್ನಲ್ಲಿ ಹಲವರ ತಲೆಯನ್ನು ಒಡೆದಿದ್ದಾರೆ. ಇದು ಪೊಲೀಸರ ಪ್ರತೀಕಾರದ ಮನಸ್ಥಿತಿಯನ್ನು ಬಿಂಬಿಸುತ್ತಿದೆ ಎಂದು ಕಿಡಿಕಾರಿದರು. ಸಂಘ ಪರಿವಾರದ ನಾಯಕರು ಬಹಿರಂಗವಾಗಿಯೇ ಪೊಲೀಸರ ಬಗ್ಗೆ ಅವಾಚ್ಯವಾಗಿ ನಿಂದಿಸಿದ್ದರು.
ಆಗ ಮಾತನಾಡದೆ, ತೆಪ್ಪಗಿದ್ದ ಪೊಲೀಸರು ಒಂದು ಸಮುದಾಯದ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದೀಗ ತಮ್ಮ ತಪ್ಪನ್ನು ಮುಚ್ಚಿ ಹಾಕಲು ಪೊಲೀಸರು ಎಂದಿನಂತೆ ತಮ್ಮ ಮೇಲೆ ಹಲ್ಲೆಯ ಕಟ್ಟುಕತೆ ಕಟ್ಟುತ್ತಿದ್ದಾರೆ. ಆದ್ದರಿಂದ ಯಾವುದೇ ರಾಜಕೀಯದ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ತಕ್ಷಣ ಬಂಧಿತರಿಬ್ಬರನ್ನು ಬಿಡುಗಡೆ ಮಾಡಬೇಕೆಂದು ಎ.ಕೆ.ಅಶ್ರಫ್ ಆಗ್ರಹಿಸಿದರು.
ಇದನ್ನೂ ಓದಿ : ಪಿಎಫ್ಐ ಪ್ರತಿಭಟನೆ ವೇಳೆ ಲಾಠಿ ಚಾರ್ಜ್.. ಹಲವರಿಗೆ ಗಾಯ, ಉಪ್ಪಿನಂಗಡಿಯಲ್ಲಿ 144 ಸೆಕ್ಷನ್ ಜಾರಿ