ಮಂಗಳೂರು: ಭಾರತೀಯ ದೇಶಿ ತಳಿಗಳ ಹಾಲು ಉತ್ಪನ್ನಗಳನ್ನು ಕೈಬಿಟ್ಟು, ಏಷ್ಯಾ-ಫೆಸಿಫಿಕ್ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ ಇಂದು ಸಂಜೆ ದ.ಕ. ಮತ್ತು ಉಡುಪಿ ಜಿಲ್ಲೆಯ ಹೈನುಗಾರರು ನಗರದ ಎ.ಬಿ.ಶೆಟ್ಟಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಜಾಥಾ ನಡೆಸಿದ್ದಾರೆ. ಬಳಿಕ ಕೇಂದ್ರ ಸರ್ಕಾರ ಈ ಒಪ್ಪಂದ ಕೈಬಿಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ವಿದೇಶಿ ಹಾಲು ಆಮದು: ಕೇಂದ್ರ ಸರ್ಕಾರದ ನೀತಿಯನ್ನು ವಿರೋಧಿಸಿ ಹೈನುಗಾರರಿಂದ ಜಾಥಾ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ, ಆರ್.ಸಿ.ಇ.ಪಿ.(ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ) ಒಪ್ಪಂದವನ್ನು ಕೇಂದ್ರ ಸರ್ಕಾರ ಮಾಡುವಂತಹ ಹಂತದಲ್ಲಿದೆ. ಜಪಾನ್, ಚೀನಾ, ನ್ಯೂಜಿಲ್ಯಾಂಡ್, ದಕ್ಷಿಣ ಕೊರಿಯಾ ಮುಂತಾದ ಏಷ್ಯನ್ ರಾಷ್ಟ್ರಗಳೊಂದಿಗೆ ಈ ಒಪ್ಪಂದವನ್ನು ಮಾಡಲಾಗುತ್ತಿದೆ. ನ್ಯೂಜಿಲ್ಯಾಂಡ್ ದೇಶದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಬಹಳ ಕನಿಷ್ಠ ಖರ್ಚು-ವೆಚ್ಚದಲ್ಲಿ ಉತ್ಪಾದನೆಯಾಗುತ್ತದೆ. ಈ ಹಾಲಿನ ಉತ್ಪನ್ನಗಳು ನಮ್ಮ ದೇಶಕ್ಕೆ ಆಮದಾದಲ್ಲಿ ನಮ್ಮ ದೇಶದ ಹೈನುಗಾರರಿಗೆ ಬಹು ದೊಡ್ಡ ಆರ್ಥಿಕ ಸಂಕಷ್ಟವನ್ನು ಉಂಟು ಮಾಡಲಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ 2022ರಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲಾಗುತ್ತದೆ ಎಂದು ಹೇಳುತ್ತಿದೆ. ಆದರೆ ಈ ರೀತಿ ಆದಾಯ ದ್ವಿಗುಣವಾಗಬೇಕಾದರೆ ಹೈನುಗಾರರಿಗೆ ಈಗ ಸಿಗುವ ಧಾರಣೆಗಿಂತ ಎರಡು ಪಟ್ಟು ಹೆಚ್ಚುವರಿ ಧಾರಣೆ ದೊರೆಯಬೇಕಾಗುತ್ತದೆ. ಆದ್ದರಿಂದ ಈ ಒಪ್ಪಂದ ಆದಲ್ಲಿ ಬಹುದೊಡ್ಡ ಹೊಡೆತ ಹೈನುಗಾರರ ಮೇಲಾಗಲಿದೆ ಎಂದರು.ಮುಂದಿನ ದಿನಗಳಲ್ಲಿ ನಮಗೆ ಪೂರಕವಾದ ತೀರ್ಮಾನ ಕೈಗೊಳ್ಳದಿದ್ದಲ್ಲಿ ಬಹುದೊಡ್ಡ ಹೋರಾಟವನ್ನು ನಡೆಸಲಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕೆಂದು ರವಿರಾಜ್ ಹೆಗ್ಡೆ ಹೇಳಿದರು.