ಮಂಗಳೂರು: ಗೋ ರಕ್ಷಣೆ, ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗರು ಕೆಂಜಾರು ಬಳಿಯಲ್ಲಿನ ಕಪಿಲಾ ಗೋಶಾಲೆಯನ್ನೇ ನೆಲಸಮ ಮಾಡಿದ್ದಾರೆ. ಗೋವಿನ ಹೆಸರಿನಲ್ಲಿ ಅಧಿಕಾರಕ್ಕೆ ಬಂದು ಇದೀಗ ಅದೇ ಗೋವುಗಳನ್ನು ಬೀದಿಪಾಲು ಮಾಡಿರುವ ಬಿಜೆಪಿಗರ ನೈತಿಕತೆಯನ್ನು ಪ್ರಶ್ನಿಸಬೇಕಾಗಿದೆ. ಮತದಾರರು ಮುಂದಿನ ಚುನಾವಣೆಯಲ್ಲಿ ಇದಕ್ಕೆ ಸರಿಯಾದ ಉತ್ತರ ನೀಡಲಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ, ವಕೀಲ ದಿನಕರ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಕೆಂಜಾರು ಬಳಿಯ ಕಪಿಲಾ ಗೋಶಾಲೆಯನ್ನು ಒಡೆದು ಹಾಕಿರುವುದನ್ನು ಖಂಡಿಸಿ ವಂದೇ ಮಾತರಂ ಗೋ ಸಂರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಡವಿ ಹಾಕಿರುವ 300 ದೇಸೀ ತಳಿಗಳಿರುವ ಗೋಶಾಲೆಗೆ ವ್ಯವಸ್ಥಿತವಾಗಿರುವ ಗೋಶಾಲೆಯನ್ನು ತಕ್ಷಣ ಕಟ್ಟಿಕೊಡಬೇಕು. ಅಲ್ಲದೇ, ಗೋಹತ್ಯಾ ನಿಷೇಧ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಕಪಿಲಾ ಗೋಶಾಲೆಯಲ್ಲಿ ಯಾವುದೇ ಅಕ್ರಮಗಳಿಲ್ಲ. ಆದರೆ ರಾಜಕೀಯ ಮುಖಂಡರು ಅಕ್ರಮ ಸೃಷ್ಟಿ ಮಾಡಿದ್ದಾರೆ. 2008ರಲ್ಲಿ ಕಪಿಲಾ ಗೋಶಾಲೆ ಆರಂಭಗೊಂಡಿದ್ದು, ಅಲ್ಲಿಂದ ಇಲ್ಲಿಯವರೆಗೆ ಕಾಣದ ಅಕ್ರಮ ಇದೀಗ ಅದೇ ಪರಿಸರದಲ್ಲಿ ಕೋಸ್ಟ್ ಗಾರ್ಡ್ ತರಬೇತಿ ಕೇಂದ್ರ ಸ್ಥಾಪನೆ ಆಗುವಾಗ ಅವರಿಗೆ ಅಕ್ರಮ ಕಂಡಿದೆ. ದ.ಕ ಜಿಲ್ಲೆಯಲ್ಲಿನ ಪಬ್, ಮಟ್ಕಾ ದಂಧೆ, ಮಸಾಜ್ ಪಾರ್ಲರ್, ವೇಶ್ಯಾವಾಟಿಕೆಯಲ್ಲಿ ಕಾಣದ ಅಕ್ರಮಗಳು ಬಿಜೆಪಿಗರಿಗೆ ಗೋಶಾಲೆಯಲ್ಲಿ ಕಂಡಿದೆ ಎಂದರೆ ಅವರ ತತ್ವ ಸಿದ್ಧಾಂತಗಳು ಏನಾದವು ಎಂದು ಪ್ರಶ್ನೆ ಮಾಡಬೇಕಿದೆ ಎಂದು ಹೇಳಿದರು.
ಓದಿ: ಸರ್ಕಾರಿ ಜಾಗ ಅತಿಕ್ರಮಣ ಆರೋಪದಡಿ ಕಪಿಲಾ ಗೋಶಾಲೆ ನೆಲಸಮ: 300ಕ್ಕೂ ಅಧಿಕ ದೇಸಿ ತಳಿ ಗೋವುಗಳು ಬೀದಿಪಾಲು
ಗೋವುಗಳನ್ನು ಅತ್ಯಂತ ಪ್ರೀತಿಯಿಂದ ನೋಡುವ ಕಪಿಲಾ ಗೋಶಾಲೆಯ ಪ್ರಕಾಶ್ ಶೆಟ್ಟಿಯವರ ಹೆಸರನ್ನು ಗೋಹಂತಕರ ಜೊತೆ ಸೇರಿಸುತ್ತಾರೆಂದಾದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರು ಮುಸ್ಲಿಂ ಎಂದು ಹೇಳಿ ಯಾರ ಕೈಕಾಲು ಕಡಿಸಿದ್ದಾರೆಂದು ನಾವು ಹೇಳಬೇಕಾಗುತ್ತದೆ. ಪ್ರತಿಭಟನೆ ನಡೆಯುತ್ತಿದೆ ಎಂದಾಕ್ಷಣ ಗೋಶಾಲೆಯ ಬಗ್ಗೆ ಅಪಪ್ರಚಾರ ಮಾಡಲಾಯಿತು. ಗೋಶಾಲೆ ಮುಖ್ಯಸ್ಥರ ಚಾರಿತ್ರ್ಯ ಹರಣ ಮಾಡಲಾಯಿತು. ಪ್ರಕಾಶ್ ಶೆಟ್ಟಿಯವರಲ್ಲಿ ಗೋಶಾಲೆ ಇರುವ ಸ್ಥಳ ಸಕ್ರಮ ಎಂದು ಹೇಳಲು ಸೇಲ್ ಡೀಡ್ ಮಾಡಿರುವ ದಾಖಲೆ ಇದೆ. ತಮ್ಮ ಗೋಶಾಲೆ ಸಕ್ರಮ ಎಂದು ಆಣೆ ಮಾಡಲು ಕರೆದರೂ ಯಾಕೆ ಯಾರೂ ಬರುತ್ತಿಲ್ಲ ಎಂದು ದಿನಕರ್ ಶೆಟ್ಟಿ ಪ್ರಶ್ನಿಸಿದರು.
ಕಪಿಲಾ ಗೋಶಾಲೆಯ ರೂವಾರಿ ಪ್ರಕಾಶ್ ಶೆಟ್ಟಿ ಮಾತನಾಡಿ, ಕಪಿಲಾ ಖಾಸಗಿ ಗೋಶಾಲೆಯನ್ನು ಒಡೆದು ಹಾಕಿ ದೇಸೀ ತಳಿಯ 300 ಗೋವುಗಳನ್ನು ಬೀದಿಪಾಲು ಮಾಡುವ ಮೂಲಕ ದ.ಕ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಆ ಗೋವುಗಳನ್ನು ಎತ್ತಿಕೊಂಡು ಹೋಗುವ ಸಂಚು ರೂಪಿಸಿದ್ದಾರೆ. ಅಲ್ಲದೇ ಸರ್ಕಾರದ ವತಿಯಿಂದ ಕಪಿಲಾ ಗೋಶಾಲೆಗೆ ಎರಡು ಎಕರೆ ಜಮೀನು ನೀಡಲಾಗಿದೆ ಎಂದು ನಳಿನ್ ಕುಮಾರ್ ಅವರು ಪ್ರಚಾರ ಮಾಡುತ್ತಿದ್ದಾರೆ. ಇದುವರೆಗೆ ನಮ್ಮ ಗೋಶಾಲೆಗೆ ಯಾವುದೇ ಜಮೀನು ನೀಡಲಾಗಿಲ್ಲ. ಇವರಿಗೆ ಒಂದು ಗೋಶಾಲೆ ಮಾಡುವ ಯೋಗ್ಯತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.