ಉಳ್ಳಾಲ: ಗಾಂಜಾ ವ್ಯಸನಿಗಳು ಕಂಡು ಬಂದರೆ ಕುಂಪಲದ ನಿವಾಸಿಗಳು, ಸಂಘಟನೆಗಳು ಸೇರಿಕೊಂಡು ಅವರ ಮನೆಯೇ ಇರದ ಹಾಗೆ ಮಾಡುತ್ತೇವೆ. ಅಂತವರನ್ನು ಊರಿನಿಂದ ಓಡಿಸುತ್ತೇವೆ ಎಂದು ಕುಂಪಲ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಎಚ್ಚರಿಕೆ ನೀಡಿದ್ದಾರೆ.
ಕುಂಪಲ ಪರಿಸರದಲ್ಲಿ ನಡೆಯುತ್ತಿರುವ ಗಾಂಜಾ ದಂಧೆ ಮತ್ತು ವ್ಯಸನಿಗಳ ವಿರುದ್ಧ ಆಶ್ರಯ ಕಾಲೋನಿಯಿಂದ ಕುಂಪಲ ಶಾಲಾ ಮೈದಾನದವರೆಗೆ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆ ಹಾಗೂ ಜಾಗೃತಿ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಮುಖವಾಗಿ ಈ ಭಾಗಕ್ಕೆ ಗಾಂಜಾ ತಂದು ಕೊಡುವವರು ಯಾರು ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ. ಪ್ರೇಕ್ಷಾ ಸಾವಿನ ನಂತರ ಪ್ರತಿ ಮನೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗಾಂಜಾದ ಮೂಲವನ್ನು ಪೊಲೀಸರು ಪತ್ತೆ ಹಚ್ಚದೇ ಇದ್ದಲ್ಲಿ ಜನರ ಆತಂಕವನ್ನು ದೂರ ಮಾಡುವುದು ಅಸಾಧ್ಯ. ಗಾಂಜಾ ದಂಧೆಯಲ್ಲಿ ಯಾವುದೇ ಪಕ್ಷದವರು, ಸಂಘಟನೆಯವರು ಇದ್ದರೂ ಬಿಡುವುದಿಲ್ಲ. ಸಮಾಜದ ಸ್ವಾಸ್ಥ್ಯ ಹಾಳುಗೆಡವುವವರ ವಿರುದ್ಧ ಹೋರಾಟ ನಿರಂತರವಾಗಲಿದೆ. ಇಂದು ನಡೆದ ಜಾಗೃತಿ ಜಾಥಾ ಗಾಂಜಾ ವ್ಯಸನಿಗಳಿಗೆ ಕಟ್ಟ ಕಡೆಯ ಎಚ್ಚರಿಕೆ. ಮುಂದೆ ಇಂತಹ ದುಷ್ಕೃತ್ಯಗಳು ಮುಂದುವರೆದಲ್ಲಿ ಅಂತವರ ಮನೆಯೇ ಇರಲು ಬಿಡುವುದಿಲ್ಲ. ಊರಿನಿಂದಲೇ ಓಡಿಸುತ್ತೇವೆ ಎಂದು ಎಚ್ಚರಿಸಿದರು.
ಓದಿ : ವಿದ್ಯಾರ್ಥಿನಿ ಸಾವಿನ ಹಿಂದೆ ಗಾಂಜಾ ವ್ಯಸನಿಗಳ ಕೈವಾಡ?: ವ್ಯಕ್ತಿ ಮನೆ ಮೇಲೆ ಕಲ್ಲೆಸೆತ
ಕುಂಪಲ ಆಶ್ರಯ ಕಾಲನಿ ನಿವಾಸಿ ವಿದ್ಯಾರ್ಥಿನಿ ಹಾಗೂ ಹವ್ಯಾಸಿ ಮಾಡೆಲ್ ಪ್ರೇಕ್ಷಾ (17) ನಿಗೂಢ ಸಾವಿಗೂ ಗಾಂಜಾ ವ್ಯಸನಿಗಳಿಗೂ ಸಂಬಂಧವಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಆರೋಪ ಮಾಡಿದ್ದ ಮೋಹನ್ ಶೆಟ್ಟಿ ಎಂಬುವರ ಮನೆ ಮೇಲೆ ಇತ್ತೀಚೆಗೆ ಗಾಂಜಾ ವ್ಯಸನಿಗಳ ತಂಡ ಕಲ್ಲೆಸೆದು ದಾಂಧಲೆ ನಡೆಸಿತ್ತು. ಹೀಗಾಗಿ ಕುಂಪಲ ಸುತ್ತಮುತ್ತಲಿನ ನಿವಾಸಿಗಳು ಗಾಂಜಾ ವ್ಯಸನಿಗಳ ವಿರುದ್ಧ ಸಮರ ಸಾರಿದ್ದು, ಪೊಲೀಸರು ಗಾಂಜಾ ದಂಧೆಯನ್ನು ಮಟ್ಟ ಹಾಕದಿದ್ದರೆ, ಅಂತವರ ಮನೆಯೇ ಇಲ್ಲದಂತೆ ಮಾಡಿ, ಊರಿನಿಂದ ಓಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.