ಮಂಗಳೂರು: ಜನವರಿ 3ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ವಿರುದ್ಧದ ಪ್ರತಿಭಟನೆಗೆ ತಾಲೂಕು ಜಾತ್ಯಾತೀತ ಹೋರಾಟ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಸಮಿತಿ ಮುಖ್ಯಸ್ಥ ಕಾವು ಹೇಮನಾಥ್ ಶೆಟ್ಟಿ ತಿಳಿಸಿದ್ದಾರೆ.
ಪುತ್ತೂರಿನ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿ, ಭಾರತದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯುವ ಮುನ್ಸೂಚನೆ ಕಂಡುಬರುತ್ತಿದೆ. ಆ ಹೋರಾಟಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ನಾಳೆ ಕಿಲ್ಲೆ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸಾಧ್ಯವಾದಷ್ಟು ಎಲ್ಲಾ ಜಾತಿ ಧರ್ಮಗಳ ಜನರು, ಸಮಾನ ಮನಸ್ಕರು ಮತ್ತು ಜಾತ್ಯಾತೀತ ನಾಯಕರುಗಳು ಭಾಗವಹಿಸಿ ಪುತ್ತೂರಿನ ಇತಿಹಾಸದಲ್ಲಿ ದಾಖಲಾಗುವಂತಹ ಅಪೂರ್ವ ಕಾರ್ಯಕ್ರಮವಾಗಿ ಮೂಡಿಬರಲು ಸಹಕರಿಸುವಂತೆ ತಿಳಿಸಿದರು.
ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಸಂವಿಧಾನ ವಿರೋಧಿ ಕಾನೂನುಗಳನ್ನು ಜಾರಿಗೆ ತಂದರೆ ಅದರ ವಿರುದ್ಧದ ಹೋರಾಟ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಕೋಮುವಾದಿ ಶಕ್ತಿಗಳು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರೋಧಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಜಾತಿ-ಧರ್ಮಗಳ ಮಧ್ಯೆ ಕಂದಕ ಸೃಷ್ಟಿ ಮಾಡಲು ಹೊರಟಿದ್ದಾರೆ. ಇದನ್ನು ತಡೆಯುವುದೇ ಜಾತ್ಯಾತೀತ ಹೋರಾಟ ಸಮಿತಿಯ ಆಶಯ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ತಿದ್ದುಪಡಿಗೆ ಅವಕಾಶ ನೀಡದೆ ಅದನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಮಾಯಕರ ಹೋರಾಟಗಾರರ ಮೇಲೆ ಗುಂಡು ಹಾರಿಸಿ. ಕೊಲೆ ಮಾಡುವುದಾದರೆ ಅದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಈ ವೇಳೆ ಸಹ ಸಮಿತಿಯ ಸಂಚಾಲಕ ಲ್ಯಾನ್ಸಿ ಮಸ್ಕರೇನಸ್ , ಪುತ್ತೂರು ಯೂತ್ ಕಾಂಗ್ರೆಸ್ ಅಧ್ಯಕ್ಷ ಯು ಟಿ ತೌಸಿಫ್, ಮಾಜಿ ನಗರಸಭಾ ಸದಸ್ಯ ಅನ್ವರ್ ಕಾಸಿಂ, ಹನೀಫ್ ಬಗ್ಗು ಮೂಲೆ ಹಾಜರಿದ್ದರು