ಮಂಗಳೂರು: ಕರ್ನಾಟಕದ ಚುನಾವಣೆಯಲ್ಲಿ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಆತಂಕವಾದದ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಆತಂಕವಾದದ ಬಗ್ಗೆ ಭಯವಿಲ್ಲ. ಇಲ್ಲಿ 40 ಪರ್ಸೆಂಟ್ ಕಮಿಷನ್, ಬೆಲೆ ಏರಿಕೆ, ನಿರುದ್ಯೋಗದ ಆತಂಕ ಇದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದರು.
ಮಂಗಳೂರಿನ ಮುಲ್ಕಿಯ ಕೊಳ್ನಾಡುವಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ಅವರು, ತುಳುವಿನಲ್ಲೇ ಭಾಷಣ ಆರಂಭಿಸಿ 'ನಮಸ್ಕಾರ ತುಳುನಾಡು, ಮಾತೆರೆಗ್ಲ ಎನ್ನ ಸೊಲ್ಮೆಲು'.. ಎಂದು ಹೇಳಿ, ಇದು ದೈವ ಭೂಮಿ, ಧರ್ಮದ ಮಣ್ಣು, ಜೈನ ಧರ್ಮದ ಪವಿತ್ರ ಬೀಡು ಮೂಡಬಿದ್ರೆ. ಬಪ್ಪನಾಡು, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವರ ಆಶೀರ್ವಾದ ಈ ಭೂಮಿಗಿದೆ ಎಂದು ಬಣ್ಣಿಸಿದರು.
ಧರ್ಮದ ಊರಾಗಿರೋ ಇಲ್ಲಿಂದ ಒಂದು ಒಳ್ಳೆಯ ಸಂದೇಶ ದೇಶಕ್ಕೆ ಸಿಕ್ಕಿದೆ. ಸತ್ಯ ನಿಮ್ಮ ಹೃದಯದಲ್ಲಿರಬೇಕು, ಸತ್ಯದ ಭಾವದ ಜೊತೆ ಸೇವೆ ಮಾಡಬೇಕು. ಇದು ಸೇವೆ ಮತ್ತು ಸತ್ಯ, ಸೇವೆಯ ಮನೋಭಾವನೆ ಇರಬೇಕು. ನೀವೆಲ್ಲರೂ ಕಷ್ಟಪಟ್ಟು ಕೆಲಸ ಮಾಡ್ತೀರ, ನೌಕರಿ ಮಾಡ್ತೀರ. ಇದೆಲ್ಲವೂ ದೇಶದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಚುನಾವಣೆಯ ಸಮಯ, ಪಕ್ಷದ ಪ್ರಮುಖರು ನಿಮ್ಮ ಎದುರು ಬರ್ತಿದ್ದಾರೆ. ಇಲ್ಲಿಯೂ ಮೋದಿ ಸಭೆ ಆಗಿತ್ತು. ಆದರೆ ಈ ಸರ್ಕಾರ ನಿಮಗಾಗಿ ಏನು ಮಾಡಿದೆ?. ಯಾವ ಯೋಜನೆ ತಂದಿದೆ?. ಮೋದಿ ಚುನಾವಣೆ ಹೊತ್ತಲ್ಲಿ ಬಂದು ಆತಂಕವಾದ ಮತ್ತು ಸುರಕ್ಷತೆ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಇದೆಲ್ಲಾ ನಡೆಯಲ್ಲ ಅನಿಸುತ್ತದೆ ಎಂದು ಪ್ರಿಯಾಂಕಾ ಅಭಿಪ್ರಾಯಪಟ್ಟರು.
ಕರಾವಳಿಯ ಕಾರ್ಪೋರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್, ಕೆನರಾ ಬ್ಯಾಂಕ್ ಎಲ್ಲವನ್ನೂ ವಿಲೀನ ಮಾಡಿದರು. ಇಂದಿರಾಗಾಂಧಿ ನವ ಮಂಗಳೂರು ಬಂದರು ಮಾಡಿದರು. ನೆಹರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದರು. ಆದರೆ ಮೋದಿ ಎರಡನ್ನೂ ಅದಾನಿಗೆ ಮಾರಾಟ ಮಾಡಿದರು. ಇದೆಲ್ಲವೂ ಬಿಜೆಪಿಯ ಭ್ರಷ್ಟಾಚಾರದ ಬಹುದೊಡ್ಡ ಆತಂಕ ಎಂದರು.
ನಿಮ್ಮ ಅಗತ್ಯಗಳಿಗಾಗಿ ಮತ ಚಲಾಯಿಸಿ: ಚುನಾವಣೆ ಹೊತ್ತಲ್ಲಿ ಅಭಿವೃದ್ಧಿ, ಉದ್ಯೋಗದ ಬಗ್ಗೆ ಮಾತಾಡದೆ ಧರ್ಮದ ಬಗ್ಗೆ ಭಾಷಣವನ್ನ ಮಾಡುತ್ತಾರೆ. ಕರ್ನಾಟಕ ಶಿಕ್ಷಣದ ಪ್ರಸಿದ್ಧ ಕೇಂದ್ರ, ಇಲ್ಲಿ ಉದ್ಯೋಗ ಸೃಷ್ಟಿಸಲು ಅವಕಾಶ ಇದೆ. ಬೆಂಗಳೂರು ಸೇರಿ ಬೇರೆ ಜಿಲ್ಲೆಯ ಯುವಕರಿಗೆ ಉತ್ತಮ ಶಿಕ್ಷಣ ದೊರೆಯುತ್ತದೆ. ಆದರೆ ಇಲ್ಲಿ ಉದ್ಯೋಗ ಸಿಗದೇ ಜಗತ್ತಿನ ಬೇರೆ ಕಡೆ ಹೋಗಿ ಕೆಲಸ ಪಡೆಯುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ನಿಮ್ಮ ಅಗತ್ಯಗಳಿಗಾಗಿ ಮತ ಚಲಾಯಿಸಿ ಎಂದು ಕರೆ ನೀಡಿದರು.
ರಾಜ್ಯದ ಬಿಜೆಪಿ ಸರ್ಕಾರ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ?. ಇವರದು 40 ಪರ್ಸೆಂಟ್ ಸರ್ಕಾರ ಎಂದು ಗುತ್ತಿಗೆದಾರರ ಸಂಘವೇ ದೂರು ನೀಡಿದೆ. ನಂದಿನ ಹಾಲು ಚೆನ್ನಾಗಿಯೇ ಇದೆ, ಈಗ ಗುಜರಾತ್ನ ಅಮುಲ್ಗೆ ವಿಲೀನ ಮಾಡಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಕೆಲವು ಗ್ಯಾರಂಟಿಗಳನ್ನ ಕೊಟ್ಟಿದೆ, ಆದರೆ ಅದಕ್ಕೆ ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸ್ತಿದ್ದಾರೆ. ಆದರೆ ನಮ್ಮ ಸರ್ಕಾರ ಬೇರೆ ರಾಜ್ಯಗಳಲ್ಲಿ ಕೊಟ್ಟ ಗ್ಯಾರಂಟಿ ಈಡೇರಿಸಿದೆ. ಬಿಜೆಪಿಯವರು ಲೂಟಿಯಲ್ಲೇ ತೊಡಗಿದ್ದಾರೆ, ನಿಮ್ಮ ಸಮಸ್ಯೆ ಕೇಳದೆ, ಧರ್ಮ ಮತ್ತು ಆತಂಕವಾದದ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಜನಾರ್ದನ ಪೂಜಾರಿ ಭಾಗಿ: ನೆಹರು ಕುಟುಂಬದೊಂದಿಗೆ ಆತ್ಮೀಯ ಸಂಬಂಧ ಹೊಂದಿದ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಇಳಿವಯಸ್ಸಿನಲ್ಲೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೇದಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳಾದ ಮಿಥುನ್ ರೈ, ಇನಾಯತ್ ಆಲಿ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮೊದಲಾದವರು ಭಾಗಿಯಾಗಿದ್ದರು.
ಇದನ್ನೂ ಓದಿ: ಸೋನಿಯಾ ಪ್ರಚಾರದ ಬಗ್ಗೆ ಪ್ರಧಾನಿ ವ್ಯಂಗ್ಯ : ಕಾಂಗ್ರೆಸ್ ಬೆದರಿದೆ ಎಂದ ಮೋದಿ