ಮಂಗಳೂರು: ಸರ್ಕಾರದ ಅನುದಾನದಿಂದ ದ.ಕ. ಜಿಲ್ಲಾಡಳಿತದ ವತಿಯಿಂದ ನಡೆಸಲಾಗುವ ಅಬ್ಬಕ್ಕ ಉತ್ಸವವನ್ನು ಫೆ.29 ನಡೆಸಲಾಗುವುದೆಂದು ಘೋಷಣೆ ಮಾಡಲಾಗಿದೆ. ಆದರೆ ಆಮಂತ್ರಣ ಪತ್ರಿಕೆಯಲ್ಲಿ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಹೆಸರನ್ನು ನಮೂದಿಸದಿರುವುದರಿಂದ ಏಪ್ರಿಲ್ 18-19 ರಂದು ಸಾರ್ವಜನಿಕ ಅಬ್ಬಕ್ಕ ಉತ್ಸವವನ್ನು ತೊಕ್ಕೊಟ್ಟಿನಲ್ಲಿ ನಡೆಸಲು ಚಿಂತನೆ ನಡೆಸಿದ್ದೇವೆ ಎಂದು ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧ್ಯಕ್ಷ ಕೆ. ಜಯರಾಮಶೆಟ್ಟಿ ಹೇಳಿದರು.
ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ ಈ ಉತ್ಸವವನ್ನು ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಅಧಿಕಾರದ ವೃಂದದವರನ್ನು ಹೊರತುಪಡಿಸಿ ಕಾರ್ಯಕ್ರಮ ನಡೆಸುವುದಾಗಿ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೂ ಸುಮಾರು 120 ಮಂದಿಯ ಹೆಸರನ್ನು ಸೇರಿಸಿ ಜಿಲ್ಲಾ ಸಮಿತಿ ರಚಿಸಲಾಗಿದೆ ಎಂದು ಹೇಳಿದರು.
1997ರಿಂದ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಉಳ್ಳಾಲ ಅಬ್ಬಕ್ಕ ಉತ್ಸವ ಸಮಿತಿ ಮಾಡಿ ಉಳ್ಳಾಲದ ಆಸುಪಾಸಿನಲ್ಲಿ ಅಬ್ಬಕ್ಕ ಉತ್ಸವವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿದ್ದೇವೆ. ಬಳಿಕ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಅಬ್ಬಕ್ಕನ ಹೆಸರಿನಲ್ಲಿ ಸರ್ಕಾರ ಉತ್ಸವ ಮಾಡಬೇಕೆಂದು ಒತ್ತಾಯ ಮಾಡಿದ್ದೇವು. 2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವಾಗ 25 ಲಕ್ಷ ರೂ. ಬಿಡುಗಡೆ ಮಾಡಿದರು. ಅಂದಿನಿಂದ ಇಂದಿನವರೆಗೂ ಕರ್ನಾಟಕ ಸರ್ಕಾರ ಅಬ್ಬಕ್ಕ ಉತ್ಸವಕ್ಕೆ ಹಣ ನೀಡುತ್ತಾ ಬರುತ್ತಿದೆ ಎಂದು ಹೇಳಿದರು.