ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ನೀರಿನ ಬಿಲ್ ಹೆಚ್ಚು ಬರುತ್ತಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆ ಮೀಟರ್ ರೀಡಿಂಗ್ ಮಾಡುವ ಸಿಬ್ಬಂದಿಗೆ ಪರಿಹಾರ ಸೂತ್ರ ಬಳಸಲು ಸೂಚಿಸಲಾಗಿದೆ ಎಂದು ನೂತನ ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಇಂದು ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ನೀರಿನ ಮೀಟರ್ ರೀಡಿಂಗ್ ಮಾಡುವ ಸಿಬ್ಬಂದಿಯು ಬಳಕೆದಾರರಿಗೆ ಹೆಚ್ಚುವರಿ ಬಿಲ್ ಬಂದಿದೆ ಎಂದು ಗಮನಕ್ಕೆ ತಂದರೆ ಮೀಟರ್ ರೀಡಿಂಗ್ ಬಿಲ್ ನೀಡದೆ ಈ ಹಿಂದಿನ ತಿಂಗಳ ಬಿಲ್ ನಷ್ಟೆ ಮೊತ್ತವನ್ನು ಪಾವತಿಸಲು ಸೂಚಿಸಲಾಗಿದೆ ಎಂದರು.
ಸುಮಾರು 800 ಕೋಟಿ ರೂ. ವೆಚ್ಚದಲ್ಲಿ 7 ವರ್ಷದ ಕಾಲಾವಧಿಯಲ್ಲಿ ನಿರ್ಮಾಣವಾಗುತ್ತಿರುವ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ತ್ವರಿತಗತಿಯಲ್ಲಿ ಮಾಡುವಂತೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನಿರ್ಗಮನ ಮೇಯರ್ ದಿವಾಕರ್ ಪಾಂಡೇಶ್ವರ, ಉಪಮೇಯರ್ ಸುಮಂಗಳ, ಶಾಸಕರಾದ ಭರತ್ ಶೆಟ್ಟಿ , ವೇದವ್ಯಾಸ ಕಾಮತ್ ಮತ್ತು ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.