ಸುಳ್ಯ(ದಕ್ಷಿಣ ಕನ್ನಡ): ಬಿಜೆಪಿ ಯುವ ಮುಖಂಡ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಇಂದು ಬೆಳಿಗ್ಗೆ ಮೂವರನ್ನು ಎನ್ಐಎ(ರಾಷ್ಟ್ರೀಯ ತನಿಖಾ ದಳ) ಬಂಧಿಸಿದೆ. ಶಾಫಿ ಬೆಳ್ಳಾರೆ, ಇಕ್ಬಾಲ್ ಬೆಳ್ಳಾರೆ ಹಾಗೂ ಸುಳ್ಯದ ಇಬ್ರಾಹಿಂ ಶಾ ಅವರ ಬೆಳ್ಳಾರೆಯ ಮನೆ ಮೇಲೆ ಇಂದು ಬೆಳಗಿನ ಜಾವ ದಾಳಿ ಮಾಡಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಇದರಲ್ಲಿ ಇಕ್ಬಾಲ್ ಬೆಳ್ಳಾರೆ ಎಂಬಾತ ಬೆಳ್ಳಾರೆ ಗ್ರಾ.ಪಂ ಸದಸ್ಯರಾಗಿದ್ದು, ಶಾಫಿ ಬೆಳ್ಳಾರೆ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಹಾಗೆಯೇ ಸುಳ್ಯ, ಉಪ್ಪಿನಂಗಡಿ, ಮೈಸೂರು, ಹುಬ್ಬಳ್ಳಿ ಕಡೆಗಳಲ್ಲಿ ಎನ್ಐಎ ತಂಡ ದಾಳಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಎನ್ಐಎ ತಂಡ ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ನಾಪತ್ತೆಯಾದ ನಾಲ್ಕು ಜನ ಆರೋಪಿಗಳ ಬಂಧನಕ್ಕೆ ಸಹಕರಿಸುವವರಿಗೆ ಬಹುಮಾನವನ್ನು ಘೋಷಣೆ ಮಾಡಿದೆ.
ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಯ ತಲೆಗೆ 5 ಲಕ್ಷ ಘೋಷಣೆ
ಈ ಬಗ್ಗೆ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ, ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಪರೀಕ್ಷೆ: ವಶಕ್ಕೆ ಪಡೆದ ಬಳಿಕ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ ಹಾಗೂ ಸುಳ್ಯದ ಇಬ್ರಾಹಿಂ ಶಾನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಕೆಲ ಗಂಟೆಗಳ ನಂತರ ಅವರನ್ನು ಬೆಂಗಳೂರಿಗೆ ಎನ್ಐಎ ತಂಡ ಕರೆದೊಯ್ದಿರುವುದಾಗಿ ಮೂಲಗಳು ತಿಳಿಸಿವೆ.