ಮಂಗಳೂರು: ರಾಜ್ಯದಲ್ಲಿ ಬಿಜೆಪಿಯ ಸಂಭಾವ್ಯ ಮುಖ್ಯಮಂತ್ರಿಗಳಿಗೆ ಈ ಬಾರಿ ಟಿಕೆಟ್ ಸಿಗದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮಾಡಿದ್ದಾರೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು ಟಿ ಖಾದರ್ ಆರೋಪಿಸಿದ್ದಾರೆ.
ನಗರದಲ್ಲಿಂದು ಶನಿವಾರ ಮಾತನಾಡಿದ ಅವರು, ಹಿಂದೆಲ್ಲ ಬಿಜೆಪಿಯದ್ದು ಮೂರು ಬಾಗಿಲು ಇತ್ತು.ಈಗ 25 ಬಾಗಿಲು ಆಗಿದೆ. ಈ ಬಾರಿಯ ಟಿಕೆಟ್ ಘೋಷಣೆಯಲ್ಲೇ ಎಲ್ಲವೂ ಗೊತ್ತಾಗುತ್ತೆ. ಯಾರೆಲ್ಲ ಮುಖ್ಯಮಂತ್ರಿ ರೇಸ್ನಲ್ಲಿದ್ರಾ, ಅವರೆಲ್ಲರಿಗೂ ಟಿಕೆಟ್ ಸಿಗದಂತೆ ಪ್ರಹ್ಲಾದ್ ಜೋಶಿ ಯೋಜನೆ ರೂಪಿಸಿದ್ದಾರೆ. ಯಾರೂ ತನಗೆ ಮುಖ್ಯಮಂತ್ರಿ ರೇಸ್ಗೆ ಬರದಂತೆ ಅವರು ಮಾಡಿದ್ದಾರೆ ಎಂದರು.
ಇತಿಹಾಸದಲ್ಲಿ ಕಾಂಗ್ರೆಸ್ ಈ ಬಾರಿ ಬೇರೆ ಪಕ್ಷಕ್ಕಿಂತಲೂ ಮೊದಲು ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದೆ. ಬಹಳ ಮುಖ್ಯವಾಗಿ ಗೆಲ್ಲುವ ಕೆಲವೊಂದು ಸೀಟ್ಗಳು ಬಾಕಿಯಿದೆ. ಅದನ್ನು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಒಂದೆರೆಡು ದಿನಗಳಲ್ಲಿ ಆ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಕಾಂಗ್ರೆಸ್ - ಬಿಜೆಪಿ ನೇರ ಹಣಾಹಣಿ: ಪ್ರಾಬಲ್ಯಕ್ಕಾಗಿ ಇತರ ಪಕ್ಷಗಳಿಂದಲೂ ಪ್ರತಿತಂತ್ರ
ಕೆಎಂಎಫ್ ಅಮೂಲ್ಗೆ ಮಾರಾಟ ಮಾಡುವ ಷಡ್ಯಂತ್ರ- ಖಾದರ್: ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಹೈನುಗಾರಿಕೆ ಕುಂಠಿತಗೊಂಡಿದೆ. ಕೆಎಂಎಫ್ ನ ಹಾಲು ಹಾಗೂ ಹಾಲಿನ ಉತ್ಪನ್ನಗಳು ಕಡಿಮೆಯಾಗಿದೆ. ಹಿಂದೆ ಬಿಎಸ್ಎನ್ಎಲ್ ನ ಕಾರ್ಯವನ್ನು ವ್ಯವಸ್ಥಿತವಾಗಿ ಸ್ಥಗಿತಗೊಳಿಸುತ್ತ ಬಂದಿದ್ದ ಕೇಂದ್ರ ಸರಕಾರ ಇದೀಗ, ಅದನ್ನು ಮಾರಾಟ ಮಾಡುವ ಚಿಂತನೆ ನಡೆಸುತ್ತಿದೆ. ಇದೇ ರೀತಿ ಕೆಎಂಎಫ್ ಅನ್ನು ವ್ಯವಸ್ಥಿತವಾಗಿ ಅಮೂಲ್ ಗೆ ಮಾರಾಟ ಮಾಡುವ ಷಡ್ಯಂತ್ರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದರು.
ಕೆಎಂಎಫ್ ಮೇಲೆ ಕೇಂದ್ರದ ಕಣ್ಣು ಬಿದ್ದಿದೆ- ಯು ಟಿ ಖಾದರ್: ಕೆಎಂಎಫ್ ಅನ್ನು ಮೆಲ್ಲಮೆಲ್ಲನೆ ನುಂಗಿ ಹಾಕಲು ಕೇಂದ್ರ ಸರ್ಕಾರ ಎಲ್ಲ ರೂಪುರೇಷೆಗಳನ್ನು ಮಾಡಿಕೊಂಡಿದೆ. ದೇಶದ ಎಲ್ಲ ಸಂಪತ್ತನ್ನು ಗುಜರಾತ್ ಕೈಯಲ್ಲಿ ಕ್ರೋಢೀಕರಿಸಬೇಕೆಂದು ಕೇಂದ್ರ ಸರ್ಕಾರ ಈ ರೀತಿಯ ತಂತ್ರಗಾರಿಕೆಯನ್ನು ಹೂಡುತ್ತಿದೆ. ಆದ್ದರಿಂದ ಗುಜರಾತ್ ನ ಅಮೂಲ್ಗೆ ಸ್ಪರ್ಧೆಯೊಡ್ಡುವ ಕೆಎಂಎಫ್ ಮೇಲೆ ಕೇಂದ್ರದ ಕಣ್ಣು ಬಿದ್ದಿದೆ. ರಾಜ್ಯದ ರೈತರು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೆ ದೊಡ್ಡ ಮಟ್ಟದ ಸಮಸ್ಯೆ ಎದುರಾಗಲಿದೆ ಎಂದು ಯು ಟಿ ಖಾದರ್ ಅಪಾದನೆ ಮಾಡಿದರು.
ಕರಾವಳಿ ಬ್ಯಾಂಕ್ಗಳನ್ನು ಲಾಭವಿಲ್ಲದ ಬ್ಯಾಂಕ್ಗಳೊಂದಿಗೆ ವಿಲೀನ: ಕರಾವಳಿಯ ಬ್ಯಾಂಕ್ ಗಳಾದ ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಗಳನ್ನು ಲಾಭವಿಲ್ಲದ ಬ್ಯಾಂಕ್ ಗಳೊಂದಿಗೆ ವಿಲೀನ ಮಾಡಿ, ಆ ಬ್ಯಾಂಕ್ ಗಳ ಹೆಸರನ್ನು ಹೇಳ ಹೆಸರಿಲ್ಲದಂತೆ ಮಾಡಿದರು. ಕೆಎಂಎಫ್ ವಿಚಾರದಲ್ಲೂ ಕೇಂದ್ರ ಸರ್ಕಾರ ಅದೇ ರೀತಿ ಮಾಡುವ ಪ್ರಯತ್ನದಲ್ಲಿದೆ. ಆದ್ದರಿಂದ ಕಾಂಗ್ರೆಸ್ ಇದನ್ನು ಖಂಡಿಸುತ್ತಿದ್ದು, ಕೆಎಂಎಫ್ ವಿಲೀನವಾಗಲು ಬಿಡುವುದಿಲ್ಲ ಎಂದು ಖಾದರ್ ಹೇಳಿದರು.
ಇದನ್ನೂಓದಿ:ಇನ್ನೂ ಸಮಯ ಇದೆ, ಕಾದು ನೋಡೋಣ.. ಟಿಕೆಟ್ ನೀಡಿಯೇ ನೀಡುತ್ತಾರೆ: ಶೆಟ್ಟರ್ ವಿಶ್ವಾಸ