ಮಂಗಳೂರು: ಮುಲ್ಕಿಯ ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿಯ ಸಿಬ್ಬಂದಿಯಾಗಿರುವ ದಲಿತ ವ್ಯಕ್ತಿಯ ಮೇಲೆ ವೃಥಾಕಾರಣ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ದೂರುದಾರರು ಕೇರಳದ ಕಾನತ್ತೂರು ಕ್ಷೇತ್ರಕ್ಕೆ ಬಂದು ಸತ್ಯ ಪ್ರಮಾಣ ಮಾಡಲಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪರಿವರ್ತನವಾದ ಸಂಘಟನೆ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಮುಖಂಡ ಅಶೋಕ್ ಕೊಂಚಾಡಿ, ಅತಿಕಾರಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಹಗರಣಗಳನ್ನು ಮುಚ್ಚಿ ಹಾಕಲು ಅಮಾಯಕ ವ್ಯಕ್ತಿಯ ಮೇಲೆ ಸುಳ್ಳು ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಆಪಾದನೆ ಹೊತ್ತಿರುವ ವ್ಯಕ್ತಿ ಕಳೆದ 4 ವರ್ಷಗಳಿಂದ ಕರವಸೂಲಿಗಾರನಾಗಿ ಕರ್ತವ್ಯ ಸಲ್ಲಿಸುತ್ತಾ ಕರ್ತವ್ಯ ನಿಷ್ಠೆಗೆ ಹೆಸರಾಗಿದ್ದರು. ಇವರು ಕೆಲವೊಂದು ನಿರ್ದಿಷ್ಟ ಅವ್ಯವಹಾರಗಳ ಬಗ್ಗೆ ಧ್ವನಿ ಎತ್ತಿದ್ದರು. ಇದರಿಂದ ಅವರನ್ನು ನೌಕರಿಯಿಂದ ವಜಾಗೊಳಿಸಲು ವಿನಾ ಕಾರಣ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.
ನ್ಯಾಯ ಅನ್ಯಾಯದ ಸತ್ಯ ಪರೀಕ್ಷೆಗೆ ಹೆಸರುವಾಸಿಯಾದ ಕೇರಳದ ಕಾನತ್ತೂರು ನಾಲ್ವರ್ ಕ್ಷೇತ್ರದಲ್ಲಿ ಅಕ್ಟೋಬರ್ 8ರಂದು ಬೆಳಿಗ್ಗೆ 10 ಗಂಟೆಗೆ ದೂರುದಾರರು ಸತ್ಯಪ್ರಮಾಣಕ್ಕೆ ಬರಲಿ ಎಂದು ಆಗ್ರಹಿಸಿದರು.