ಬೆಳ್ತಂಗಡಿ: ತಾಲೂಕಿನಲ್ಲಿ ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ರಸ್ತೆಗಳು, ತಡೆಗೋಡೆಗಳು ಹಾಗೂ ಇನ್ನಿತರ ಕಾಮಗಾರಿಗಳು ಕಳಪೆ ಮಟ್ಟ ತಲುಪಲು ಇಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ಕಮೀಷನ್ ವ್ಯವಹಾರವೇ ಕಾರಣ ಎಂದು ಮಾಜಿ ಶಾಸಕ ವಸಂತ ಬಂಗೇರ ಗಂಭೀರ ಆರೋಪ ಮಾಡಿದ್ದಾರೆ.
ಬೆಳಾಲು ಸಮೀಪದ ಒಣ್ಯಾಲ್ ಕೆರೆ ಕಿನ್ಯಾಜೆ ಕಾಂಕ್ರೀಟ್ ರಸ್ತೆಯ ಕಳಪೆ ಕಾಮಗಾರಿಯನ್ನು ವೀಕ್ಷಿಸಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಯಾವ ಕಾಮಗಾರಿಯೂ ಸರಿಯಾಗಿ ನಡೆಯುತ್ತಿಲ್ಲ. ಎಲ್ಲಾ ಕಾಮಗಾರಿಯೂ ಈ ರೀತಿಯೇ ನಡೆಯುತ್ತಿವೆ. ಕೆಲವು ಕಡೆಗಳಲ್ಲಿ ಶಾಸಕರ ಕೆಲವು ಆಪ್ತರಿಗೆ ಮಾತ್ರ ಕಾಮಗಾರಿಗಳನ್ನು ಗುತ್ತಿಗೆ ನೀಡಲಾಗಿದೆ. ಅವರು ಮಾಡಿದಂತಹ ಕೆಲವು ತಡೆಗೋಡೆಗಳು ಈಗಲೇ ಮಳೆಗೆ ಕೊಚ್ಚಿಕೊಂಡು ಹೋಗಿವೆ. ಅದಲ್ಲದೇ ಕೆಲವು ಕೆಲಸಗಳನ್ನು ಮಳೆ ಪ್ರಾರಂಭವಾಗುವ ಸಮಯದಲ್ಲಿ ಪ್ರಾರಂಭಿಸಿ ಮೊದಲ ಮಳೆ ಬರುವಾಗಲೇ ಕೊಚ್ಚಿಕೊಂಡು ಹೋಗಿದೆ ಎಂದು ಸುಳ್ಳು ಹೇಳಿ ಬಿಲ್ ಮಂಜೂರು ಮಾಡಿಸಿಕೊಂಡ ಘಟನೆಗಳು ನನ್ನ ಗಮನಕ್ಕೆ ಬಂದಿದೆ ಎಂದರು.
ಮುಂದಿನ ದಿನಗಳಲ್ಲಿ ತಾಲೂಕಿನ ಪ್ರತಿಯೊಂದು ಭಾಗಕ್ಕೆ ಭೇಟಿ ನೀಡಿ ಅಲ್ಲಿ ನಡೆದ ಕಾಮಗಾರಿಗಳನ್ನು ವೀಕ್ಷಿಸಿ ಕಳಪೆ ಎಂದು ಗೊತ್ತಾದರೆ ಅಧಿಕಾರಿಗಳನ್ನು ಕರೆದು ಈ ಬಗ್ಗೆ ಮಾಹಿತಿ ಪಡೆದುಕೊಂಡು ಕೆಲಸ ನಿರ್ವಹಿಸಿದ ಗುತ್ತಿಗೆದಾರನ ಬಿಲ್ ಮಂಜೂರು ಆಗದಂತೆ ತಡೆ ಹಿಡಿಯುತ್ತೇನೆ ಎಂದು ಎಚ್ಚರಿಕೆ ನೀಡಿದರು. ಸ್ಥಳೀಯ ನಿವಾಸಿಗಳು ಈ ಬಗ್ಗೆ ಪ್ರತಿಕ್ರಿಯಿಸಿ ಈ ಕಾಂಕ್ರೀಟ್ ರಸ್ತೆಯನ್ನು ಸಂಪೂರ್ಣವಾಗಿ ಅಗೆದು ತೆಗೆದು ಉತ್ತಮ ರೀತಿಯ ಮರು ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ರಂಜನ್ ಜಿ. ಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ಸ್ಥಳೀಯ ಕಾಂಗ್ರೆಸ್ ಮುಖಂಡರುಗಳಾದ ಜತ್ತನ್ನ ಗೌಡ, ದಿನೇಶ್ ಕೋಟ್ಯಾನ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.