ಮಂಗಳೂರು: ಇಲ್ಲಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು - ಬದಲಾದ ಪ್ರಕರಣ ಸಂಬಂಧ ಮಂಗಳೂರು ಠಾಣಾ(ಬಂದರು) ಪೊಲೀಸರು ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಸಿದ್ದಾರೆ. ಕೇಸ್ ಸಂಬಂಧ ಹೈದರಾಬಾದ್ ಪ್ರಯೋಗಾಲಯದಲ್ಲಿ ನಡೆಸಲಾದ ಡಿಎನ್‌ಎ ಪರೀಕ್ಷಾ ವರದಿ ತನಿಖಾಧಿಕಾರಿಯ ಕೈ ಸೇರಿದ್ದು, ದೂರುದಾರ ಮುಸ್ತಫಾ ಅವರೇ ಮಗುವಿನ ತಂದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
2021ರ ಸೆಪ್ಟೆಂಬರ್.27ರಂದು ಮುಸ್ತಫಾರ ಪತ್ನಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಗಂಡು ಶಿಶುವಿಗೆ ಜನ್ಮ ನೀಡಿದ್ದರು. ಆದರೆ, ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಜನ್ಮ ದಾಖಲೆಯಲ್ಲಿ ‘ಹೆಣ್ಣು ಮಗು’ (ಲಿಂಗ ಕಾಲಂನಲ್ಲಿ ಎಂ ಬದಲು ಎಫ್) ಎಂದು ನಮೂದಾಗಿತ್ತು. ಹುಟ್ಟಿದ ಶಿಶುವಿನ ದೇಹದ ತೂಕ ಕೇವಲ 1.4 ಕೆಜಿ ಇತ್ತು. (ಆರೋಗ್ಯವಂತ ಶಿಶುವಿನ ತೂಕ ಕನಿಷ್ಠ 2.5 ಕೆಜಿ ಇರುತ್ತದೆ). ಈ ಶಿಶುವಿಗೆ ಉಸಿರಾಟದ ತೊಂದರೆಯೂ ಕಾಣಿಸಿದ್ದರಿಂದ ತಕ್ಷಣ ಮಗುವನ್ನು ನವಜಾತ ಶಿಶುಗಳ ತೀವ್ರನಿಗಾ ಘಟಕಕ್ಕೆ (ಎನ್‌ಐಸಿಯು) ಸ್ಥಳಾಂತರಿಸಲಾಗಿತ್ತು. ತನ್ನ ಪತ್ನಿ ಗಂಡು ಶಿಶುವಿಗೆ ಜನ್ಮ ನೀಡಿದ್ದು, ತಮಗೆ ಜನಿಸಿರುವುದು ಹೆಣ್ಣು ಮಗುವಲ್ಲ ಎಂಬ ವಿಚಾರ ಕೆಲವು ದಿನಗಳ ಬಳಿಕ ಮುಸ್ತಫಾರಿಗೆ ತಿಳಿದು ಬಂದಿದೆ.
ಇದಾದ ಬಳಿಕ ಅ.14ರಂದು ಮಗುವನ್ನು ಡಿಸ್ಚಾರ್ಜ್ ಮಾಡಿಸಿ ಕುಂದಾಪುರಕ್ಕೆ ಕರೆದೊಯ್ದು ಅಲ್ಲಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಅಲ್ಲಿ ತಮಗೆ ನೀಡಿರುವುದು ಹೆಣ್ಣು ಶಿಶುವಲ್ಲ, ಗಂಡು ಶಿಶು ಎಂಬುದು ಗೊತ್ತಾಗಿದೆ. ಅಲ್ಲದೇ ಮಗುವಿನ ಆರೋಗ್ಯ ಇನ್ನಷ್ಟು ಹದಗೆಟ್ಟಿದ್ದರಿಂದ ಮರುದಿನವೇ ಮತ್ತೆ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮಗು 48 ದಿನಗಳ ಬಳಿಕ ಕೊನೆಯುಸಿರೆಳೆದಿತ್ತು.
ಬಳಿಕ ಮುಸ್ತಫಾ ಅವರು ಆಸ್ಪತ್ರೆಯ ಬೇಜವಾಬ್ದಾರಿಯ ವಿರುದ್ಧ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಮಗುವಿನ ಡಿಎನ್‌ಎ ಪರೀಕ್ಷೆ ನಡೆಸಲು ನ್ಯಾಯಾಲಯ ಒಪ್ಪಿಗೆ ಸೂಚಿಸಿತ್ತು. ಪ್ರಕರಣಗಳ ನಡೆದ ವೇಳೆ ಮುಸ್ತಾಫರ ಪತ್ನಿ ಹಾಗೂ ಮಗುವಿಗೆ ಚಿಕಿತ್ಸೆ ನೀಡಿದ ಮಕ್ಕಳ ತಜ್ಞ ಡಾ.ಗಿರೀಶ್ ಹುದ್ದೆ ತ್ಯಜಿಸಿದ್ದರು. ಗಂಡು ಶಿಶು ಎಂಬುದರ ಬದಲು ಹೆಣ್ಣು ಶಿಶುವೆಂದು ತಪ್ಪಾಗಿ ನಮೂದಿಸಿದ್ದ ಇಬ್ಬರು ಕಿರಿಯ ವೈದ್ಯರು ಕೂಡ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಮಗು ಅದಲು ಬದಲು ಪ್ರಕರಣ: ಡಿಎನ್ಎ ವರದಿ ಬರುವ ಮೊದಲೇ ಹಸುಳೆ ಸಾವು