ಸುಳ್ಯ(ದಕ್ಷಿಣ ಕನ್ನಡ): ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸರು ವಾಹನಗಳನ್ನು ಬಿಡಲು ಸಾವಿರ ರೂ ಜೊತೆಗೆ ನಾಟಿ ಕೋಳಿ ಕೇಳುತ್ತಿದ್ದಾರೆಂದು ಮಾಧ್ಯಮಗಳು ಪ್ರಸಾರ ಮಾಡಿದ್ದ ಸುದ್ದಿ ಸುಳ್ಳು ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
![ಪೊಲೀಸರು ಹಣ, ಊರಕೋಳಿ ಕೇಳಿದ ವರದಿ ಸುಳ್ಳು](https://etvbharatimages.akamaized.net/etvbharat/prod-images/kn-dk-01-crime-brk-pho-kac10008_19042020102144_1904f_1587271904_396.jpg)
ನಿನ್ನೆಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸರು ಹಣ ಪಡೆಯುತ್ತಿದ್ದಾರೆ ಮತ್ತು ಊರ ಕೋಳಿ ಕೇಳಿದ್ದಾರೆಂಬುದಾಗಿ ವರದಿ ಪ್ರಸಾರವಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಅಧೀಕ್ಷಕರು ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರ ಮೂಲಕ ಘಟನೆಯ ಬಗ್ಗೆ ತನಿಖೆ ನಡೆಸಿದ್ದಾರೆ.
ಏನಿದು ಘಟನೆ:
ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳ ಹಿನ್ನೆಲೆಯಲ್ಲಿ ಬೆಳ್ಳಾರೆ ಪೊಲೀಸರು ವಾಹನ ತಪಾಸಣೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿರಬೇಕಾದರೆ ಓಮಿನಿ ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಸಂಚಾರ ನಿಯಮ ಉಲ್ಲಂಘನೆ ಮಾಡಿ ಬರುತ್ತಿದ್ದರಿಂದ ಪೋಲೀಸರು ವಾಹನ ತಡೆದು ದಂಡ ವಿಧಿಸಿ ಕಳುಹಿಸಿದ್ದರು. ಎಲ್ಲಾ ಘಟನಾವಳಿಗಳು ಸಿ.ಸಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಆದರೆ, ನಂತರದಲ್ಲಿ ನಡೆದ ಬೆಳವಣಿಗೆಯಲ್ಲಿ ವಾಹನ ಚಾಲಕ ಪ್ರದೀಪ್ ಹಾಗೂ ಸುಂದರ ಎಂಬುವರು ಪೊಲೀಸರು ವಿರುದ್ಧ ಸುಳ್ಳು ಹೇಳಿಕೆಯನ್ನು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸ್ ಉನ್ನತಾಧಿಕಾರಿಗಳು, ಈ ಘಟನೆ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಮೇಲೆ ಕಳಂಕ ತರುವ ಉದ್ದೇಶವಾಗಿದೆ. ಇದು ಸಂಪೂರ್ಣ ಸುಳ್ಳು ಸುದ್ದಿ . ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ ಎಂದು ತಿಳಿಸಿದ್ದಾರೆ.