ಕಡಬ : ಲೈಂಗಿಕ ದೌರ್ಜನ್ಯ ನಡೆಸಿ ಯುವತಿ ಗರ್ಭಿಣಿಯನ್ನಾಗಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಠಾಣೆ ಪೊಲೀಸ್ ಕಾನ್ಸ್ ಟೇಬಲ್ ಶಿವರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆ ಇಂದು ಠಾಣೆಗೆ ಐಜಿಪಿ, ಎಸ್ಪಿ ಹಾಗೂ ಡಿವೈಎಸ್ಪಿ ಸೇರಿ ಉನ್ನತ ಅಧಿಕಾರಿಗಳು ಆಗಮಿಸಿ ಮಾಹಿತಿ ಪಡೆದಿದ್ದಾರೆ.
ಕಡಬ ಪೊಲೀಸ್ ಠಾಣೆಗೆ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದ.ಕ ಜಿಲ್ಲಾ ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಡಿವೈಎಸ್ಪಿ ಡಾ. ಗಾನಾ, ಪಿ.ಕುಮಾರ್, ಹೆಚ್ಚುವರಿ ಎಸ್ಪಿ ಶಿವಕುಮಾರ್ ಗುಣಾರೆ, ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯಕ್ ಸೇರಿ ಉನ್ನತ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಏನಿದು ಘಟನೆ?: ಯುವತಿಗೆ ಮದುವೆಯಾಗುತ್ತೇನೆಂದು ನಂಬಿಸಿರುವ ಪೊಲೀಸ್ ಕಾನ್ಸ್ ಟೇಬಲ್ ಶಿವರಾಜ್ ಆಕೆಯೊಂದಿಗೆ ಸಲುಗೆಯಿಂದ ನಡೆದುಕೊಂಡಿದ್ದ. ಲೈಂಗಿಕವಾಗಿ ಬಳಸಿಕೊಂಡ ನಂತರ ಯುವತಿ ಗರ್ಭವತಿಯಾಗಿದ್ದಾಳೆ. ಇದನ್ನು ತಿಳಿದ ಕಾನ್ಸ್‌ಟೇಬಲ್, ಯುವತಿಯನ್ನು ಮಂಗಳೂರಿಗೆ ಕರೆದೊಯ್ದು ಗರ್ಭಪಾತ ಮಾಡಿಸಿ ಗೃಹಬಂಧನದಲ್ಲಿ ಇರಿಸಿದ್ದಾನೆಂದು ಯುವತಿ ತಂದೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಆರೋಪಿಯನ್ನು ಬಂಧಿಸಿರುವ ಕಡಬ ಪೊಲೀಸರು, ಆತನ ವಿರುದ್ಧ 79/2021 ಕಲಂ 376(2), 506 IPC ಮತ್ತು 5(A),5(J)(ii)6 ಪೋಕ್ಸೋ ಆ್ಯಕ್ಟ್ 2012ರ ಪ್ರಕಾರ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಕಡಬ ಠಾಣೆಗೆ ಉನ್ನತ ಅಧಿಕಾರಿಗಳು ಆಗಮಿಸಿದ್ದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಸಾಯಂಕಾಲದ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು. ಆರೋಪಿಯನ್ನು ಕರ್ತವ್ಯದಿಂದ ವಜಾ ಮಾಡಲಾಗುವುದು. ಈಗಾಗಲೇ ಸಂತ್ರಸ್ತೆಯನ್ನು ಮತ್ತು ತಾಯಿಯನ್ನು ಪತ್ತೆ ಹಚ್ಚಲಾಗಿದೆ. ಕೆಲವು ತಪಾಸಣೆಗಳು ನಡೆಯುತ್ತಿವೆ. ಯಾವುದೇ ಕಾರಣಕ್ಕೂ ಆರೋಪಿ ಪರ ಪೊಲೀಸ್ ಇಲಾಖೆ ನಿಲ್ಲಲ್ಲ ಎಂದು ಹೇಳಿದ್ದಾರೆ.
ಈ ನಡುವೆ ವಿಹಿಂಪ ಮಹಿಳಾ ಸದಸ್ಯರು ಮಾತನಾಡಿ, ಯಾವುದೇ ಕಾರಣಕ್ಕೂ ಆರೋಪಿಯನ್ನು ರಕ್ಷಿಸುವ ಕೆಲಸ ಮಾಡಬಾರದು. ಈಗಾಗಲೇ ನೀಡಿದ ದೂರಿನ ಆಧಾರದಲ್ಲಿ ಪೋಕ್ಸೋ ಮಾತ್ರವಲ್ಲದೆ, ಭ್ರೂಣಹತ್ಯೆಯೂ ಸೇರಿದಂತೆ ಸೆಕ್ಷನ್ ಹಾಕಬೇಕು. ಪೊಲೀಸ್ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.