ಮಂಗಳೂರು:ಮನುಷ್ಯನಿಗೆ ಬಹುಬೇಗ ಹತ್ತಿರವಾಗುವ ಪ್ರಾಣಿಯಂದ್ರೆ ಶ್ವಾನ. ಅವುಗಳನ್ನು ಮಕ್ಕಳಂತೆಯೇ ಮುದ್ದಿಸಿ ಬೆಳೆಸುವ ಅದೆಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ಆದರೆ ಇಲ್ಲೊಂದು ಜೋಡಿ ಮಾತ್ರ ಇವರೆಲ್ಲರಿಗಿಂತ ವಿಭಿನ್ನ. ಯಾಕಂದ್ರೆ ಮಕ್ಕಳಿಲ್ಲವೆಂಬ ಕೊರಗನ್ನು ಈ ದಂಪತಿ ಬೀದಿನಾಯಿಗಳಿಗೆ ಪ್ರತಿದಿನ ಊಟ ಹಾಕುವ ಮೂಲಕ ಮರೆಯಲು ಪ್ರಯತ್ನಿಸುತ್ತಿದ್ದಾರೆ.
ಇವರ ಹೆಸರು ಪೂವಪ್ಪ ಕೆ. ಮಂಗಳೂರಿನ ರಿಸರ್ವ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್. ಕಳೆದ 32 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ಮೂಕಪ್ರಾಣಿಗಳ ಮೇಲೆ ಇವರಿಗೆ ಎಲ್ಲಿಲ್ಲದ ಒಲವು,ಅನುಕಂಪ. ಈ ಪ್ರಾಣಿಪ್ರೀತಿಯೇ ಕಳೆದ 15 ವರ್ಷಗಳಿಂದ ಇವರನ್ನು 27 ಬೀದಿನಾಯಿಗಳ ಹಸಿವು ನೀಗಿಸುವ ಸತ್ಕಾರ್ಯಕ್ಕೆ ಪ್ರೇರೇಪಿಸುತ್ತಿದೆ.
ಪೂವಪ್ಪ ಹಾಗೂ ಪತ್ನಿ ರಾಗಿಣಿ ಕಳೆದ 15 ವರ್ಷಗಳಿಂದ ಮಂಗಳೂರಿನ ಪೊಲೀಸ್ ಕ್ವಾಟ್ರಸ್ನಲ್ಲಿ ವಾಸವಿದ್ದಾರೆ. ಅಂದಿನಿಂದ ಇಲ್ಲಿವರೆಗೂ ಕ್ವಾಟ್ರಸ್ ಸುತ್ತಮುತ್ತ ಇರುವ ಅದೆಷ್ಟೋ ಬೀದಿ ನಾಯಿಗಳಿಗೆ ಬೆಳಗ್ಗೆ-ರಾತ್ರಿ ಎರಡು ಹೊತ್ತು ಮಾಂಸಾಹಾರ ಉಣಬಡಿಸುತ್ತಾರೆ.
ರಾಗಿಣಿಯವರು ಹಳಸಿದ ಅನ್ನವನ್ನಾಗಲೀ, ಮಿಕ್ಕಿದ ಊಟವನ್ನಾಗಲಿ ನಾಯಿಗಳಿಗೆ ನೀಡುವುದಿಲ್ಲವಂತೆ. ದಿನವೂ ಫ್ರೆಶ್ ಕೋಳಿ ಮಾಂಸ, ಲೆಗ್‌ಪೀಸ್ ಊಟವನ್ನೇ ಹಾಕುತ್ತಾರೆ. ನಾಯಿಗಳ ಊಟೋಪಚಾರಕ್ಕಾಗಿಯೇ ತಿಂಗಳಿಗೆ 15 ಸಾವಿರ ರೂಪಾಯಿ ಖರ್ಚು ಮಾಡ್ತಾರೆ. ಮಕ್ಕಳಿಲ್ಲದ ಈ ತಾಯಿ ಬೀದಿನಾಯಿಗಳ ಪಾಲಿಗೆ ಸಾಕ್ಷಾತ್ ಅನ್ನಪೂರ್ಣೇಶ್ವರಿಯಾಗಿದ್ದಾರೆ.
ನಾಯಿಗಳಿಗೆ ಊಟ ಹಾಕುವುದಷ್ಟೇ ಅಲ್ಲ, ನಾಯಿಗಳಿಗೆ ರೋಗ ಬಂದ್ರೆ ಅವುಗಳ ಯೋಗಕ್ಷೇಮವನ್ನು ಕೂಡ ಈ ಪೊಲೀಸ್ ದಂಪತಿ ನೋಡಿಕೊಳ್ತಾರೆ. ಅನಾರೋಗ್ಯಕ್ಕೊಳಗಾದ ಶ್ವಾನಗಳಿಗೆ ಹಾಲು, ಬಿಸ್ಕತ್ ಹಾಕುತ್ತಾರೆ. ಜೊತೆಗೆ ಬೇಕಾದ ಔಷಧೋಪಚಾರವನ್ನೂ ಮಾಡ್ತಾರೆ. ಪೂವಪ್ಪನವರಂತೂ ಅದೆಷ್ಟೇ ಕೆಲಸದ ಒತ್ತಡವಿದ್ದರೂ ಬೀದಿನಾಯಿಗಳಿಗೆ ಊಟ ಹಾಕುವುದನ್ನು ಮರೆಯುವುದಿಲ್ಲ. ಅನಿವಾರ್ಯ ಕಾರಣಗಳಿಂದ ತಾವು ಮನೆಯಲ್ಲಿ ಇಲ್ಲದಿದ್ದಾಗ, ನಾಯಿಗಳು ಹಸಿವಿನಿಂದ ಇರಬಾರದೆಂದು ತಮ್ಮ ಸಹೋದ್ಯೋಗಿಗಳಿಗೆ ತಿಳಿಸಿ ಅವರ ಮೂಲಕ ಆಹಾರ ಒದಗಿಸುತ್ತಾರಂತೆ.