ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳ ಕಿಸ್ಸಿಂಗ್ ಪ್ರಕರಣದ ಹಿಂದೆ 'ಟ್ರುತ್ ಆ್ಯಂಡ್ ಡೇರ್ ಗೇಮ್' ಇರುವುದು ಬೆಳಕಿಗೆ ಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎಂದು ಹೇಳಿದ್ದಾರೆ.
ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಲಿಪ್ ಲಾಕ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಆಯುಕ್ತರು, ಈ ಘಟನೆಯು ನಾಲ್ಕೈದು ತಿಂಗಳ ಹಿಂದೆ ನಡೆದಿದೆ. ಬಾವುಟಗುಡ್ಡೆಯಲ್ಲಿ ಅಪಾರ್ಟ್ಮೆಂಟ್ವೊಂದರಲ್ಲಿ ಇಬ್ಬರು ವಿದ್ಯಾರ್ಥಿಗಳು ರೂಮ್ ಮಾಡಿಕೊಂಡಿದ್ದು, ಅಲ್ಲಿಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಟ್ರುತ್ ಆ್ಯಂಡ್ ಡೇರ್ ಗೇಮ್ ಆಡಿದ್ದಾರೆ. ಅದರ ಭಾಗವಾಗಿ ಈ ಪ್ರಕರಣ ನಡೆದಿದೆ ಎಂದು ಮಾಹಿತಿ ನೀಡಿದರು.
ಘಟನೆಯ ವಿಡಿಯೋವನ್ನು ಕಳೆದೊಂದು ವಾರದ ಹಿಂದೆ ವಿದ್ಯಾರ್ಥಿಯೊಬ್ಬ ತನ್ನ ಕ್ಲಾಸ್ನ ವಾಟ್ಸ್ ಆ್ಯಪ್ ಗ್ರೂಪ್ವೊಂದಕ್ಕೆ ಹಾಕಿದ್ದ. ಆ ಬಳಿಕ ಶಿಕ್ಷಣ ಸಂಸ್ಥೆಯವರು ಇದನ್ನು ಶಿಸ್ತು ಪ್ರಾಧಿಕಾರದ ಗಮನಕ್ಕೆ ತಂದು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪೋಷಕರನ್ನು ಕರೆಯಿಸಿ ಬಳಿಕ ಅವರನ್ನು ಅಮಾನತು ಮಾಡಲಾಗಿತ್ತು. ಇದೀಗ ಈ ವಿಡಿಯೋ ವೈರಲ್ ಆಗಿರುವುದರಿಂದ ನಮ್ಮ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
ವಿಡಿಯೋ ಮಾಡಿದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹಾಗೆಯೇ ವಿದ್ಯಾರ್ಥಿನಿಯರನ್ನೂ ಠಾಣೆಗೆ ಕರೆಸಿ ವಿಚಾರಿಸಲಾಗಿದೆ. ವಿದ್ಯಾರ್ಥಿನಿಯರ ವಯಸ್ಸನ್ನು ಪರಿಶೀಲಿಸಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಆಯುಕ್ತರು ಹೇಳಿದರು.
ಈ ಬಗ್ಗೆ ಶಿಕ್ಷಣ ಸಂಸ್ಥೆಯವರು ಪೊಲೀಸರ ಗಮನಕ್ಕೆ ತರಬೇಕಿತ್ತು. ಘಟನೆ ನಡೆದ ಅಪಾರ್ಟ್ಮೆಂಟ್ ಮಾಲೀಕರ ವಿಚಾರಣೆ ನಡೆಸಿದಾಗ, ವಿದ್ಯಾರ್ಥಿಗಳು ಗಲಾಟೆ, ಮದ್ಯ ಸೇವನೆ ಸೇರಿದಂತೆ ಅನುಚಿತವಾಗಿ ವರ್ತಿಸುತ್ತಿದ್ದರಿಂದ ಎರಡು ತಿಂಗಳ ಹಿಂದೆ ರೂಮ್ನಿಂದ ಹೊರಹಾಕಲಾಗಿತ್ತು ಎಂದು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಕಿಸ್ಸಿಂಗ್ ಪಂದ್ಯ.. ವಿಡಿಯೋ ವೈರಲ್ ಮಾಡಿದ ಯುವಕನ ವಿಚಾರಣೆ