ಉಳ್ಳಾಲ: ಮಂಗಳೂರಿನಲ್ಲಿ ಕೊರೊನಾ ಸಾವಿನ ಬಳಿಕ ಕೇರಳ ಪೊಲೀಸರು ಗಡಿ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ಭದ್ರತೆಯನ್ನು ಜಾರಿಗೊಳಿಸಿದ್ದು, ತಲಪಾಡಿ ಚೆಕ್ ಪೋಸ್ಟ್ ಬಳಿಯೇ ಕೇರಳ ಚೆಕ್ ಪೋಸ್ಟ್ ನಿರ್ಮಾಣ ಮಾಡಿರುವುದು ಗಡಿ ವಿವಾದಕ್ಕೆ ಕಾರಣವಾಗಿದೆ.
ವಾರದ ಹಿಂದೆ ಕೊರೊನಾ ಸೋಂಕಿನಿಂದ ಸಾವಿನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕೇರಳ ಸರ್ಕಾರ ಕರ್ನಾಟಕದ ಗಡಿಯ ಎಲ್ಲ ಚೆಕ್ ಪೋಸ್ಟ್ಗಳಲ್ಲಿ ಇಬ್ಬರಂತೆ ಕೇರಳ ಪೊಲೀಸರನ್ನು ನಿಯುಕ್ತಿಗೊಳಿಸಿದೆ. ಈ ಹಿಂದೆ ಮಂಜೇಶ್ವರ ತೂಮಿನಾಡು ಬಳಿ ಇದ್ದ ಚೆಕ್ ಪೋಸ್ಟ್ ಅನ್ನು ತಲಪಾಡಿ ಚೆಕ್ ಪೋಸ್ಟ್ನಿಂದ 100 ಮೀಟರ್ ಅಂತರದಲ್ಲಿ ನಿರ್ಮಿಸಿದ್ದರಿಂದ ತಲಪಾಡಿ ಗ್ರಾಮ ಪಂಚಾಯಿತಿಯ ಆಕ್ಷೇಪಣೆಯಿಂದಾಗಿ ಗಡಿ ವಿವಾದಕ್ಕೆ ಕಾರಣವಾಗಿದೆ.
ರೋಗಿಗಳಿಗೆ ಜಿಲ್ಲೆಗೆ ಬರಲು ಅವಕಾಶ:
ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಕರ್ನಾಟಕ - ಕೇರಳ ಗಡಿ ಪ್ರದೇಶದಲ್ಲಿ ಸಂಚಾರ ಬಂದ್ ಮಾಡಲಾಗಿತ್ತು. ಇದರೊಂದಿಗೆ ಮಂಗಳೂರು - ಕಾಸರಗೋಡು ಹೆದ್ದಾರಿಯ ಸಂಪರ್ಕ ಸೇರಿದಂತೆ ಕೇರಳದ ರೋಗಿಗಳಿಗೂ ಮಂಗಳೂರು ಪ್ರವೇಶ ತಡೆಯಲಾಗಿತ್ತು. ಬಳಿಕ ರೋಗಿಗಳ ತಪಾಸಣೆ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಷರತ್ತಿನ ಮೇಲೆ ರೋಗಿಗಳಿಗೆ ಜಿಲ್ಲೆಗೆ ಬರಲು ಅವಕಾಶ ನೀಡಲಾಯಿತು.