ಬೆಳ್ತಂಗಡಿ: ನಾಲ್ಕು ಜನ ಯುವಕರ ತಂಡ ವಾಹನದಲ್ಲಿ ಅಕ್ಕಿ ಹಾಗೂ ಇತರೇ ಸಾಮಾನುಗಳನ್ನು ಯಾವುದೋ ಸಂಘಟನೆಯ ಹೆಸರು ಹೇಳಿಕೊಂಡು ಮನೆ ಮನೆಗೆ ವಿತರಿಸಿದ್ದಾರೆ. ಈ ವೇಳೆ ಸ್ಥಳೀಯರೊಬ್ಬರು ಈ ಬಗ್ಗೆ ವಿಚಾರಿಸಿದಾಗ ನಾವು ಮಂಗಳೂರಿನ ಸಂಘಟನೆಯೊಂದರಿಂದ ಬಡ ಕುಟುಂಬಗಳಿಗೆ ಅಕ್ಕಿ ನೀಡಲು ಬಂದಿದ್ದೇವೆ ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ.
ಇದರಿಂದ ಉದ್ರಿಕ್ತರಾದ ಗ್ರಾಮಸ್ಥರು ಇನ್ನೊಂದು ಪ್ರದೇಶದಿಂದ ಬಂದು ಇಲ್ಲಿ ಆಹಾರ ಸಾಮಾಗ್ರಿ ವಿತರಿಸುವ ಅಗತ್ಯ ಇಲ್ಲ. ಈ ಗ್ರಾಮಕ್ಕೆ ಏನೂ ತೊಂದರೆ ಅದರೂ ಈ ಗ್ರಾಮಸ್ಥರೇ ನೋಡಿಕೊಳ್ಳುತ್ತೇವೆ. ಕೊರೊನಾ ಭಯದಿಂದ ಈಗಾಗಲೇ ನಾವು ಭಯಭೀತರಾಗಿದ್ದೇವೆ ಎಂದ ಸ್ಥಳೀಯರು ತಹಶೀಲ್ದಾರ್ ಹಾಗೂ ಪಂಚಾಯತ್ ಅನುಮತಿ ಪತ್ರ ತೋರಿಸಿ ಎಂದು ಕೇಳಿದರು. ಅವರಲ್ಲಿ ಯಾವುದೇ ರೀತಿಯ ಅನುಮತಿ ಪತ್ರ ಇರಲಿಲ್ಲ. ಕೂಡಲೇ ಧರ್ಮಸ್ಥಳ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ನಂತರ ಠಾಣೆಯ ಉಪ ನಿರೀಕ್ಷಕ ಓಡಿಯಪ್ಪ ಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಒಂದು ಪಿಕಪ್ ವಾಹನ ಅದರಲ್ಲಿದ್ದ ಆಹಾರ ಸಾಮಾಗ್ರಿಗಳು ಹಾಗೂ ಪುತ್ತೂರು ತಾಲೂಕು ಕೌಕ್ರಾಡಿ ನಿವಾಸಿಗಳಾದ ಸಿದ್ದೀಕ್, ಟಿಪ್ಪುಸುಲ್ತಾನ್, ಅಬ್ದುಲ್ ರಹಿಮಾನ್, ಅಬ್ದುಲ್ ಅಜೀಜ್ ಎಂಬುವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.