ಮಂಗಳೂರು: ಉದ್ಯಮಿ ಹಾಗೂ ಆತನ ಸ್ನೇಹಿತನನ್ನು ಅಪಹರಿಸಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸೆರೆ ಇಟ್ಟು ಹಣಕ್ಕಾಗಿ ಬೇಡಿಕೆಯಿಟ್ಟಿರುವ ಏಳು ಮಂದಿ ಅಪಹರಣಕಾರರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೃತ್ಯಕ್ಕೆ ಬಳಸಿರುವ ವಾಹನ, ಮಾರಕಾಯುಧ ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ, ಮಚ್ಚಂಪಾಡಿ ಮೂಲದ ಅತ್ತಾವರ ಅಪಾರ್ಟ್ಮೆಂಟ್ ನಿವಾಸಿ ಮಹಮ್ಮದ್ ಇಕ್ಬಾಲ್(33), ಮಚ್ಚಂಪಾಡಿ, ವರ್ಕಾಡಿ ನಿವಾಸಿ ಯಾಕೂಬ್ ಎಂ(33), ಮಚ್ಚಂಪಾಡಿ, ಪಾವೂರು ನಿವಾಸಿ ಉಮರ್ ನವಾಫ್(25), ಮಂಗಲ್ಪಾಡಿ, ಬಂದ್ಯೋಡು ನಿವಾಸಿ ಶಂಶೀರ್(30), ಮಂಗಲ್ಪಾಡಿ, ಉಪ್ಪಳ ನಿವಾಸಿ ಸೈಯ್ಯದ್ ಮೊಹಮ್ಮದ್ ಕೌಸರ್(40), ಮಚ್ಚಂಪಾಡಿ ಪೋಸ್ಟ್ ಆಫೀಸ್ ಬಳಿ ನಿವಾಸಿ ನೌಶಾದ್(27), ಮಂಗಲ್ಪಾಡಿ, ಉಪ್ಪಳ ನಿವಾಸಿ ಶೇಖ್ ಮೊಹಮ್ಮದ್ ರಿಯಾಝ್(25) ಬಂಧಿತ ಆರೋಪಿಗಳು.
ಪ್ರಕರಣದ ವಿವರ:
ಮಂಗಳೂರಿನ ತಲಪಾಡಿಯ ಕೆ.ಸಿ.ರೋಡ್ ಬಳಿಯಿಂದ ಉದ್ಯಮಿ ಅಹ್ಮದ್ ಅಶ್ರಫ್ ಎಂಬುವರನ್ನು ಎ.22ರಂದು ಮಧ್ಯಾಹ್ನ 1.30ರ ಸುಮಾರಿಗೆ ತಂಡವೊಂದು ಕಾರಿನಲ್ಲಿ ಬಂದು ಅಪಹರಣ ಮಾಡಿತ್ತು. ಅದಲ್ಲದೇ ಫಲಹಾ ಶಾಲೆಯಾಗಿ ದೇವಿಪುರ, ಕೆದಂಬಾಡಿ ಮೂಲಕ ಹೊಸಂಗಡಿಗೆ ಬಂದ ತಂಡ ಅಹ್ಮದ್ ಅಶ್ರಫ್ ಸ್ನೇಹಿತ ಜಾವೇದ್ ಎಂಬುವವವರನ್ನು ಕೂಡಾ ಅಪಹರಿಸಿತ್ತು. ಈ ಇಬ್ಬರನ್ನೂ ಅಪಹರಣಕಾರರು ಪೈವಳಿಕೆ ಎಂಬಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಒತ್ತೆಯಾಳಾಗಿ ಇಟ್ಟಿದ್ದರು.
ಅಹ್ಮದ್ ಅಶ್ರಫ್ ಎಂಸಿಟಿ ಟ್ರೇಡಿಂಗ್ ಕಂಪನಿ, ಎಂಸಿಟಿ ಟ್ರೋಲ್ ಡೀಲ್ , ಕ್ರಿಪ್ಲೋ ಕರೆನ್ಸಿ ಹಾಗೂ ಫಾರೆಕ್ಟ್ ಟ್ರೇಡಿಂಗ್ ಸಂಸ್ಥೆ ನಡೆಸುತ್ತಿದ್ದು, ಈ ಮೂಲಕ ಹಣ ದುಪ್ಪಟ್ಟು ಮಾಡಿಕೊಡುವ ವ್ಯವಹಾರ ನಡೆಸುತ್ತಿದ್ದರು. ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದಲ್ಲಿ ಮೂರು ಪಟ್ಟು ಹಣ ನೀಡುವ ಬಗ್ಗೆ ಅಹ್ಮದ್ ಅಶ್ರಫ್ ಹಾಗೂ ಜಾವೇದ್ ನಂಬಿಸಿ ಅಹ್ಮದ್ ಇಕ್ಬಾಲ್ ರಿಂದ 27 ಲಕ್ಷ ರೂ. ಹಣ ಹೂಡಿಕೆ ಮಾಡಿಸಿದ್ದರು. ಎಂಸಿಟಿ ಕಂಪನಿಗೆ ಹೂಡಿಕೆ ಮಾಡಿರುವ ಹಣ ಡಾಲರ್ ಮೂಲಕ ಖಾತೆಗೆ ಜಮೆಯಾಗುವ ನಿಯಮವಿದ್ದು, ಅದರಂತೆ ಲಾಭಾಂಶ 99 ಲಕ್ಷ ರೂ. ಪಾವತಿಯಾಗಬೇಕಿತ್ತು. ಆದರೆ, ಅಹ್ಮದ್ ಅಶ್ರಫ್ ಅವರಿಗೆ ಕೇವಲ 10 ಲಕ್ಷ ರೂ. ಮಾತ್ರ ನೀಡಲಾಗಿತ್ತು. ಹಣ ನೀಡುವಂತೆ ಒತ್ತಾಯಿಸಿದ್ದರೂ ಇವರು ಕ್ಯಾರೇ ಅನ್ನಲಿಲ್ಲ. ಆದ್ದರಿಂದ ಇಬ್ಬರನ್ನೂ ಅಹ್ಮದ್ ಇಕ್ಬಾಲ್ ತನ್ನ ಸಹಚರರೊಂದಿಗೆ ಸೇರಿ ಅಪಹರಣ ಮಾಡಿದ್ದ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ತಿಳಿಸಿದರು.
ಅಹ್ಮದ್ ಇಕ್ಬಾಲ್ ಈ ಕೃತ್ಯ ನಡೆಸಲು ಮೊದಲು ನಪ್ಪಟೆ ರಫೀಕ್ ಎಂಬಾತನನ್ನು ಸಂಪರ್ಕಿಸಿದ್ದ, ಆದರೆ, ಆತ ದುಬಾರಿ ಹಣ ಬೇಡಿಕೆ ಇಟ್ಟ ಪರಿಣಾಮ ಅದನ್ನು ಕೈಬಿಟ್ಟು ಮಚ್ಚಂಪಾಡಿಯ ಉಮರ್ ನವಾಫ್ ಎಂಬಾತನನ್ನು ಸಂಪರ್ಕಿಸಿದ್ದ. ಈ ಹಿನ್ನೆಲೆಯಲ್ಲಿ ಉಮರ್ ನವಾಫ್ ಸೂಚನೆಯಂತೆ ಅಹ್ಮದ್ ಅಶ್ರಫ್ ನನ್ನು ಕೆ.ಸಿ.ರೋಡ್ನಿಂದ ಅಪಹರಣ ಮಾಡಿದ್ದ. ಬಳಿಕ ಆತನ ಸ್ನೇಹಿತ ಜಾವೇದ್ನನ್ನು ಅಪಹರಣ ಮಾಡಿ ಒತ್ತೆಯಾಳಾಗಿಟ್ಟು ಹಣಕ್ಕಾಗಿ ಬೇಡಿಕೆ ಇಟ್ಟು ದೈಹಿಕವಾಗಿ ಹಲ್ಲೆ ನಡೆಸಲಾಗಿತ್ತು.
ಬಳಿಕ ಇಬ್ಬರ ಮನೆಯವರಿಗೂ ಇಂಟರ್ನೆಟ್ ಕರೆ ಮೂಲಕ ಸಂಪರ್ಕಿಸಿ 25 ಲಕ್ಷ ರೂ. ಹಣ, ಚಿನ್ನಾಭರಣ ಹಾಗೂ ಮಂಜೇಶ್ವರದಲ್ಲಿರುವ 60 ಸೆಂಟ್ಸ್ ಜಾಗವೊಂದರ ಮೂಲ ದಾಖಲೆಯನ್ನು ಪಡೆದುಕೊಂಡು ಅದಕ್ಕೆ ಸಹಿ ಹಾಕಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಅಪಹರಣ ಮಾಡಿರುವ ಇಬ್ಬರನ್ನೂ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆ. ಮನೆಯವರು ಅಪಹರಣಕಾರರು ಕೇಳಿದ ಎಲ್ಲವನ್ನೂ ಒದಗಿಸಿದ್ದಾರೆ.
ಆದರೆ, ಆ ಬಳಿಕ ಅಹ್ಮದ್ ಅಶ್ರಫ್ ಪತ್ನಿ ರಶೀದಾ ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಎ.24ರಂದು ತಲಪಾಡಿ ಬಳಿಯ ಸಾಂತ್ಯ ಎಂಬಲ್ಲಿಂದ ಇಬ್ಬರನ್ನೂ ರಕ್ಷಿಸಿದ್ದಾರೆ. ಅಲ್ಲದೆ ಏಳು ಮಂದಿ ಆರೋಪಿಗಳ ಸಹಿತ ಜಮೀನುಪತ್ರ, ಮೂರು ಕಾರು, ಚಿನ್ನಾಭರಣ, ಹಲವಾರು ಮೊಬೈಲ್ ಫೋನ್ಗಳು ಹಾಗೂ ಮೂರು ನಾಲ್ಕು ಮಾರಕಾಸ್ತ್ರವನ್ನು ವಶಪಡಿಸಿಕೊಂಡಿದ್ದಾರೆ. ಇನ್ನಷ್ಟು ಮಂದಿಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ತನಿಖೆ ಮುಂದುವರಿದಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ತಿಳಿಸಿದ್ದಾರೆ.