ಮಂಗಳೂರು : ನೆಲ್ಯಾಡಿ ಹೊಸಮಜಲು ಎಂಬಲ್ಲಿ ಕೆಲವು ವರ್ಷಗಳಿಂದ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಬೃಹತ್ ಫರ್ನಿಶಿಂಗ್ ಆಯಿಲ್ ಮಿಕ್ಸಿಂಗ್ ಅಡ್ಡೆ ಮೇಲೆ ಪುತ್ತೂರು ಡಿವೈಎಸ್ಪಿ ಗಾನಾ.ಪಿ ಕುಮಾರ್ ಅವರ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ.
ದಾಳಿಯ ವೇಳೆ ಎರಡು ಟ್ಯಾಂಕರ್, ಮಿಕ್ಸಿಂಗ್ ಗೆ ಬಳಸುತ್ತಿದ್ದ ಉಪಕರಣಗಳು ಸೇರಿದಂತೆ ಹಲವು ಸ್ವತ್ತುಗಳನ್ನು ವಶಪಡಿಸಿಕೊಂಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹೊಸಮಜಲು ಸೇತುವೆಯ ಬಳಿ ಕೆಲವು ವರ್ಷಗಳಿಂದ ಈ ಆಯಿಲ್ ಮಿಕ್ಸಿಂಗ್ ದಂಧೆ ಅವ್ಯಾಹತವಾಗಿ ನಡೆಯುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಹಲವಾರು ಬಾರಿ ಪೊಲೀಸರು, ಮಾಧ್ಯಮ ಪ್ರತಿನಿಧಿಗಳು ಈ ಅಕ್ರಮ ನಡೆಯುತ್ತಿರುವ ಅಡ್ಡೆಗೆ ದಾಳಿ ನಡೆಸಲು ಮುಂದಾಗಿದ್ದರೂ ಯಾವುದಾದರೂ ಮೂಲಗಳಿಂದ ಮಾಹಿತಿ ಸೋರಿಕೆಯಾಗಿ ಆ ಪ್ರಯತ್ನಗಳು ವಿಫಲವಾಗುತ್ತಿದ್ದವು.
ಆದರೆ ಮಂಗಳವಾರ ಸಂಜೆ ಖಚಿತ ಮಾಹಿತಿ ಆಧರಿಸಿ ಪುತ್ತೂರು ಡಿವೈಎಸ್ಪಿ ಗಾನಾ ಪಿ.ಕುಮಾರ್ ನೇತೃತ್ವದ ಪೊಲೀಸರ ತಂಡವು ಈ ಅಡ್ಡೆಗೆ ದಾಳಿ ಮಾಡಿ ಅಕ್ರಮವನ್ನು ಪತ್ತೆಹಚ್ಚಿದೆ. ಪೊಲೀಸರು ದಾಳಿ ಮಾಡುವ ಸಮಯದಲ್ಲಿ ಎರಡು ಟ್ಯಾಂಕರ್ಗಳಲ್ಲಿ ಫರ್ನಿಶಿಂಗ್ ಆಯಿಲ್ ಮಿಕ್ಸಿಂಗ್ ದಂಧೆ ನಡೆಯುತ್ತಿತ್ತು. ದಾಳಿ ಮಾಡಿದ ಸಮಯದಲ್ಲಿ ಸುಮಾರು 36 ಸಾವಿರ ಲೀಟರ್ನಷ್ಟು ಫರ್ನಿಶಿಂಗ್ ಆಯಿಲ್ ಪತ್ತೆಯಾಗಿದೆ.
ಭೂಗತವಾಗಿ ಎರಡು ಬೃಹತ್ ಟ್ಯಾಂಕ್ ಗಳು, ವಿದ್ಯುತ್ ಹಾಗೂ ಡೀಸೆಲ್ ಚಾಲಿತ ಪಂಪುಗಳು ಪತ್ತೆಯಾಗಿದೆ. ವಿಪರ್ಯಾಸವೆಂದರೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಯಾವುದೇ ಹೆದರಿಕೆ ಇಲ್ಲದೇ ಈ ದಂಧೆ ನಡೆಯುತ್ತಿತ್ತು.
ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಋಷಿಕೇಶ್ ಸೋನಾವಣೆ, ಎಎಸ್ಪಿ ವಿ.ಬಿ ಭಾಸ್ಕರ್, ಕಡಬ ತಹಶಿಲ್ದಾರ್ ಅನಂತಶಂಕರ್, ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಸುಷ್ಮಾ, ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಮತ್ತು ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ಪೂರ್ವ ತಾಲೂಕಿನಲ್ಲಿ ಮಿನಿ ಲಾಲ್ಬಾಗ್: ಇಂದು ಸಿಎಂ ಬಿಎಸ್ವೈ ಉದ್ಘಾಟನೆ
ಈ ಅಕ್ರಮ ದಂಧೆಯಲ್ಲಿ ಉನ್ನತ ಮಟ್ಟದಲ್ಲಿ ಪ್ರಾಬಲ್ಯವಿರುವ ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬಂದಿದೆ. ಈ ಅಕ್ರಮ ವ್ಯವಹಾರದಲ್ಲಿ ಪೊಲೀಸ್ ಅಧಿಕಾರಿಗಳು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.