ಮಂಗಳೂರು (ದಕ್ಷಿಣಕನ್ನಡ): ನಾಳೆ ಪ್ರಧಾನಿ ಮೋದಿಯವರು ಮಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಮಾವೇಶ ನಡೆಯುವ ಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ನಾಳೆ ನಡೆಯುವ ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವ ರೀತಿ ಕರ್ತವ್ಯ ನಿರ್ವಹಿಸಬೇಕು ಎಂದು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮ ನಡೆಯುವ ಮೈದಾನದಲ್ಲಿ ಕೇವಲ 2 ಸಿಸಿಟಿವಿ ಅಳವಡಿಸಿರುವುದಕ್ಕೆ ಕಾರ್ಯಕ್ರಮ ನಿರ್ವಹಣೆ ಮಾಡುತ್ತಿರುವ ಕಂಪನಿ ಮೇಲೆ ಗರಂ ಆದರು. ತಕ್ಷಣ ಮೈದಾನದ ಎಲ್ಲಾ ಭಾಗಗಳಿಗೆ ಸಿಸಿಟಿವಿ ಅಳವಡಿಸಬೇಕೆಂದು ಎಡಿಜಿಪಿ ಅಲೋಕ್ ಕುಮಾರ್ ತಾಕೀತು ಮಾಡಿದರು. ಈ ವೇಳೆ ಭದ್ರತೆಗೆ ನಿಯೋಜಿಸಿರುವ ಪೊಲೀಸರಿಗೂ ಖಡಕ್ ಎಚ್ಚರಿಕೆ ನೀಡಿದರು.
ಜೊತೆಗೆ ಕಾರ್ಯಕ್ರಮದ ಸಂದರ್ಭದಲ್ಲಿ ಪೊಲೀಸರು ತೀವ್ರ ನಿಗಾ ವಹಿಸಬೇಕು. ಭಾಷಣ ಮಾಡುವ ಸಂದರ್ಭದಲ್ಲಿ ಭಾಷಣ ನೋಡುವುದು, ಮೊಬೈಲ್ ನಲ್ಲಿ ಫೋಟೋ ತೆಗೆಯುವುದನ್ನು ಮಾಡಬಾರದು. ಕಾರ್ಯಕ್ರಮಕ್ಕೆ ಬಂದಿರುವವರೊಂದಿಗೆ ಕಿರಿಕ್ ಮಾಡಬಾರದು. ಗೊಂದಲ ಸೃಷ್ಟಿಯಾದಲ್ಲಿ ಪೊಲೀಸರು ಯಾರ ಮೇಲೂ ಕೈ ಮಾಡಬಾರದು. ಕೇವಲ ಅವರ ಕೈಯನ್ನು ಹಿಂದೆ ಕಟ್ಟಿ, ಬಾಯಿ ಮುಚ್ಚಿಸಿ ವ್ಯಾನ್ ಹತ್ತಿರ ಕರೆತರಬೇಕು ಎಂದು ಸೂಚಿಸಿದರು. ಕಾರ್ಯಕ್ರಮಕ್ಕೆ ಬರುವವರ ತಪಾಸಣೆ ಬಿಗಿಯಾಗಿ ಮಾಡಬೇಕು. ಶೂ ಸಹಿತ ಸಂಪೂರ್ಣ ತಪಾಸಣೆ ಮಾಡಬೇಕೆಂದು ಪೊಲೀಸರಿಗೆ ಅವರು ಸೂಚನೆ ನೀಡಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಪ್ರಧಾನಿಯವರು ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಿಜೆಪಿ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆ ಮಂಗಳೂರು ಕಮೀಷನರ್ ನೇತೃತ್ವದಲ್ಲಿ ಬಂದೋಬಸ್ತ್ ನಡೆಯುತ್ತಿದೆ. 15 ಪ್ಲಟೂನ್ ಕೆಎಸ್ ಆರ್ ಪಿ, ಆರ್ ಎ ಎಫ್, ಗರುಡ ತಂಡ ಮತ್ತು ವಿವಿಧ ಜಿಲ್ಲೆಯ ಪೊಲೀಸರನ್ನು ಇಲ್ಲಿನ ಭದ್ರತೆಗೆ ನೇಮಕ ಮಾಡಲಾಗಿದೆ. 3 ಸಾವಿರ ಪೊಲೀಸರು, 5 ಮಂದಿ ಎಸ್ ಪಿ ಗಳು ಭದ್ರತೆಯಲ್ಲಿ ಇರುತ್ತಾರೆ ಎಂದು ಅವರು ಹೇಳಿದರು.
ಜೊತೆಗೆ ಸಿಸಿಟಿವಿ ಅಳವಡಿಕೆ ಬಗ್ಗೆ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಲೈಟರ್, ಬೆಂಕಿಪೊಟ್ಟಣ, ಬಾಟಲಿ, ಕರಪತ್ರ, ಕರಿಬಟ್ಟೆ ತರಬಾರದು. ಕರಿ ಟೀಶರ್ಟ್ ಧರಿಸುವುದನ್ನು ತಪ್ಪಿಸಬೇಕು. ಅದು ದುರುಪಯೋಗ ಆಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ : ತತ್ವಜ್ಞಾನ ಮತ್ತು ಆಡಳಿತ ಒಂದೇ ನಾಣ್ಯದ ಎರಡು ಮುಖಗಳೆಂದು ನಿರೂಪಿಸಿದವರು ಯೋಗಿ: ಬೊಮ್ಮಾಯಿ