ಸುಳ್ಯ: ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ದೇವರಗುಂಡಿ ಜಲಪಾತದ ಬಂಡೆಯಲ್ಲಿ ಫೋಟೊಶೂಟ್ ನಡೆಸಿದ ಬೆಂಗಳೂರಿನ ಮಾಡೆಲ್ ,ನಟಿ ಬೃಂದಾ ಅರಸ್ ಇದೀಗ ಕ್ಷಮೆಯಾಚನೆ ಮಾಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ತೋಡಕಾನ ದೇವರಗುಡಿ ಜಲಪಾತದ ಬಳಿ ಫೋಟೊಶೂಟ್ ಮಾಡಿದ್ದರಿಂದ ಪ್ರಕರಣ ವಿವಾದದ ರೂಪ ಪಡೆದುಕೊಂಡಿತ್ತು. ಪವಿತ್ರ ಸ್ಥಳದಲ್ಲಿ ಅರೆಬೆತ್ತಲೆ ಫೋಟೋ ಶೂಟ್ ನಡೆಸಿದ್ದು ಸಾರ್ವಜನಿಕರ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಮಾಡೆಲ್ ಬೃಂದಾ ಅರಸ್ ಇದೀಗ ಕ್ಷಮೆಯಾಚನೆ ಮಾಡಿದ್ದಾರೆ.
![photoshoot near devaragundi falls](https://etvbharatimages.akamaized.net/etvbharat/prod-images/kn-dk-03-model-issue-av-pho-kac10008_29102020232334_2910f_1603994014_229.jpg)
ನಾನು ಅಕ್ಟೋಬರ್ ಪ್ರಥಮ ವಾರದಲ್ಲಿ ತೋಡಿಕಾನಕ್ಕೆ ಹೋಗಿ ಜಲಪಾತದ ಸ್ಥಳದಲ್ಲಿ ಫೋಟೋಶೂಟ್ ನಡೆಸಿದ್ದೇವು. ಅದು ಧಾರ್ಮಿಕ ಸ್ಥಳ ಎಂಬುದು ನನಗಾಗಲಿ, ನನ್ನ ಫೋಟೋಗ್ರಾಫರ್ಗಾಗಲಿ ಗೊತ್ತಿರಲಿಲ್ಲ. ಸ್ಥಳೀಯರು ಕೂಡ ಮಾಹಿತಿ ನೀಡಿರಲಿಲ್ಲ. ಫೋಟೋಶೂಟ್ ಮಾಡುವ ಸಂದರ್ಭದಲ್ಲಿ ಯಾರೂ ಕೂಡ ನಮ್ಮ ತಂಡಕ್ಕೆ ತೊಂದರೆ ನೀಡಿಲ್ಲ. ಹೀಗಾಗಿ ಫೋಟೋ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿರುವೆ. ಇದೀಗ ಅದರ ಬಗ್ಗೆ ತಿಳಿದು ನನಗೆ ದುಃಖವಾಗಿದೆ. ಸ್ಥಳೀಯರಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಲ್ಲ ಫೋಟೋ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದೇನೆ. ಇದೀಗ ಅಲ್ಲಿನ ದೇವಸ್ಥಾನದವರನ್ನು ಮತ್ತು ಸ್ಥಳೀಯರನ್ನು ಕ್ಷಮಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಬೆಂಗಳೂರಿನ ನಟಿ ಬೃಂದಾ ಅರಸ್ ಮಾಧ್ಯಮ ಹೇಳಿಕೆ ನೀಡಿದ್ದಾರೆ.
ಈ ನಡುವೆ ತೋಡಿಕಾನ ದೇವಸ್ಥಾನದ ವ್ಯವಸ್ಥಾಪಕರಾದ ಆನಂದ. ಕೆ ಈಟಿವಿ ಭಾರತದೊಂದಿಗೆ ಮಾತನಾಡಿ, ಮಾಡೆಲ್ ಇಲ್ಲಿಗೆ ಬಂದು ಫೋಟೋಶೂಟ್ ಮಾಡಿದ ಬಗ್ಗೆ ನಮಗೆ ಮಾಹಿತಿ ಇಲ್ಲ.ಅಷ್ಟೇ ಅಲ್ಲ ಈ ಜಾಗ ದೇವಸ್ಥಾನದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಇದು ಅರಣ್ಯ ಇಲಾಖೆಯ ರಕ್ಷಿತಾರಣ್ಯ ಪ್ರದೇಶ. ಅಲ್ಲಿ ದಿನಂಪ್ರತಿ ನೂರಾರು ಜನರು ಬರುತ್ತಾರೆ. ಇಲ್ಲಿನ ಹಿರಿಯರ ಪ್ರಕಾರ ದೈವಿಕ ಶಕ್ತಿ ಕೇಂದ್ರ ಎನ್ನಲಾಗಿದೆ. ಮಾತ್ರವಲ್ಲದೆ ಇದು ಒಂದು ಅಪಾಯಕಾರಿ ಪ್ರದೇಶ. ಇಲ್ಲಿ ಈ ಹಿಂದೆಯೇ ಹಲವರು ಮೃತಪಟ್ಟಿದ್ದಾರೆ. ಆದ್ದರಿಂದ ಇಲ್ಲಿಗೆ ಸ್ಥಳೀಯರ ಮಾಹಿತಿ ಇಲ್ಲದೇ ಯಾರೂ ಅಕ್ರಮ ಪ್ರವೇಶ ಮಾಡಬಾರದು. ಅರಣ್ಯ ಇಲಾಖಾಧಿಕಾರಿಗಳಿಗಾದರೂ ಮಾಹಿತಿ ನೀಡಿ ಇಲ್ಲಿಗೆ ಪ್ರವೇಶ ಮಾಡಬೇಕು.ಇಲ್ಲಿ ದೈವಿಕ ಶಕ್ತಿ ಇದೆ ಎಂದು ಹಿರಿಯರು ಹೇಳುತ್ತಿರಬೇಕಾದರೆ ಇಂತಹ ಬಿಕಿನಿ ಫೋಟೋಶೂಟ್ ಮಾಡಿರೋದು ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.