ಮಂಗಳೂರು: ಕರಾವಳಿಯಲ್ಲಿ ಕೋಸ್ಟಲ್ ವುಡ್ನಲ್ಲಿರುವ ಸಿನಿಮಾ ಕಲಾವಿದರು ಮತ್ತು ತಂತ್ರಜ್ಞರಿಗೆ ಇದೀಗ ಇಎಸ್ಐ, ಪಿಎಫ್ ನೀಡುವ ಮೂಲಕ ಸಂಕಷ್ಟದ ಸಮಯಕ್ಕೆ ನೆರವು ನೀಡುವ ಕಾರ್ಯಾ ಆರಂಭವಾಗಿದೆ.
ತುಳು ಚಲನಚಿತ್ರಗಳಲ್ಲಿ ಸುಮಾರು ಮುನ್ನೂರಕ್ಕೂ ಅಧಿಕ ಕಲಾವಿದ ತೊಡಗಿಸಿಕೊಂಡಿದ್ದಾರೆ. ವಿವಿಧ ಬ್ಯಾನರ್ನಡಿ ಕಲಾ ಸೇವೆ ನೀಡುವ ಈ ಕಲಾವಿದರಲ್ಲಿ ಕೆಲವೇ ಜನರನ್ನು ಹೊರತುಪಡಿಸಿ ಹೆಚ್ಚಿನವರು ಹಣಕಾಸಿನ ಮುಗ್ಗಟ್ಟು ಅನುಭವಿಸುತ್ತಲೇ ಇರುತ್ತಾರೆ. ಇವರಿಗೆ ಉದ್ಯೋಗ ಭದ್ರತೆ ಇಲ್ಲದಿರುವುದು, ಒಂದೆ ಸಂಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯವಾಗದೇ ಇರುವುದರಿಂದ ಇವರಿಗೆ ಕಾರ್ಮಿಕ ಕಾನೂನಿನ ಪ್ರಯೋಜನಗಳು ಸಿಗುತ್ತಿಲ್ಲ. ಇದಕ್ಕಾಗಿ ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ ( ಕ್ಯಾಟ್ಕ) ಕಲಾವಿದರಿಗೆ ಪಿಎಫ್ ಮತ್ತು ಇಎಸ್ಐ ನೀಡುವ ಹೊಸ ಪ್ರಯತ್ನ ಆರಂಭಿಸಿದೆ.
ಐದು ವರ್ಷಗಳ ಹಿಂದೆ ಆರಂಭವಾದ ಕ್ಯಾಟ್ಕದಲ್ಲಿ ಇದೀಗ 290 ಮಂದಿ ಕಲಾವಿದರು, ತಂತ್ರಜ್ಞರು ಇದ್ದಾರೆ. ಇವರಿಗೆ ಇಎಸ್ಐ, ಪಿಎಫ್ ನೀಡುವ ಪ್ರಕ್ರಿಯೆ ಆರಂಭವಾಗಿದೆ.
ಸ್ಯಾಂಡಲ್ವುಡ್ನಲ್ಲಿ ಕಲಾವಿದ, ತಂತ್ರಜ್ಞರಿಗೆ ಪಿಎಫ್, ಇಎಸ್ಐ ವ್ಯವಸ್ಥೆ ಹಿಂದಿನಿಂದಲೂ ಇದೆ. ಆದರೆ, ಕೋಸ್ಟಲ್ ವುಡ್ ಇತ್ತೀಚಿನ ವರ್ಷಗಳಲ್ಲಿ ಬಲಗೊಳ್ಳುತ್ತಿದ್ದು, ಇದರಲ್ಲಿ ಕರ್ತವ್ಯ ನಿರ್ವಹಿಸುವ ಕಲಾವಿದರಿಗೂ ಆರೋಗ್ಯ ಭದ್ರತೆ ನೀಡುವ ಪ್ರಯತ್ನಗಳಾಗುತ್ತಿರುವುದು ಇಲ್ಲಿನ ಕಲಾವಿದರ, ತಂತ್ರಜ್ಞರ ಕುಟುಂಬ ವರ್ಗದಲ್ಲಿ ನೆಮ್ಮದಿ ತಂದಿದೆ.