ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಲ್ಕೊರೆತ ತೀವ್ರವಾಗಿದ್ದು, ಸಮುದ್ರ ಭಾಗದಲ್ಲಿ ವಾಸವಾಗಿರುವ ಜನರಲ್ಲಿ ಆಂತಕ ಹೆಚ್ಚಾಗಿತ್ತು. ಇದರ ಹಾನಿ ತಡೆಗಟ್ಟಲು ಸರ್ಕಾರದಿಂದ ಶಾಶ್ವತವಾದ ಪರಿಹಾರ ನೀಡುವ ನಿಟ್ಟಿನಲ್ಲಿ ಯೋಜನೆಯನ್ನು ಆದಷ್ಟು ಶೀಘ್ರವೇ ರೂಪಿಸಲಾಗುವುದು ಎಂದು ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಮ್ಯಾರಿಟೈಮ್ ಬೋರ್ಡ್ ಸಿಇಓ ಕಪಿಲ್ ಮೋಹನ್ ಹೇಳಿದರು.
ಜಿಲ್ಲೆಯ ವಿವಿಧೆಡೆ ಕಡಲ್ಕೊರೆತ ನಿಯಂತ್ರಣಕ್ಕೆ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು. ಉನ್ನತ ತಾಂತ್ರಿಕತೆಯ ನೆರವಿನಿಂದ ಕಡಲ್ಕೊರೆತಕ್ಕೆ ಶಾಶ್ವತ ಯೋಜನೆ ರೂಪಿಸಿ, ಜಾರಿಗೆ ತರಲಾಗುವುದು. ಉಳ್ಳಾಲ ಮುಕ್ಕಚ್ಚೇರಿ ಬಳಿ ಈ ರೀತಿಯ ಕಾಮಗಾರಿ ನಡೆಸಲಾಗಿದ್ದು, ಇದರಿಂದ ಈ ವರ್ಷ ಈ ಪ್ರದೇಶದಲ್ಲಿ ಕಡಲ್ಕೊರೆತ ಸಮಸ್ಯೆ ಎದುರಾಗಿಲ್ಲ ಎಂದು ಹೇಳಿದರು.
ಅಲ್ಲಿ ಎಡಿಬಿ ನೆರವಿನ ಕಾಮಗಾರಿಯ ಅಡಿ 18.02 ಕೋಟಿ ರೂಪಾಯಿ ವೆಚ್ಚದಲ್ಲಿ 635 ಮೀಟರ್ ಮತ್ತು 10 ಮೀಟರ್ನ ಸಂರಕ್ಷಣೆ ತಡೆಗೋಡೆಯ ಪುನರ್ವಸತಿ ಯೋಜನೆಯ ಕಾಮಗಾರಿಯನ್ನು ಅವರು ಪರಿಶೀಲನೆ ನಡೆಸಿದರು.