ಪುತ್ತೂರು: ದಿನನಿತ್ಯ ನೂರಾರು ಜನ ನಡೆದು ಹೋಗುವ 70 ವರ್ಷಕ್ಕಿಂತ ಅಧಿಕ ಹಳೆಯದಾದ ಕಿಂಡಿ ಅಣೆಕಟ್ಟು ದುರಸ್ತಿ ಕಾಣದೆ ಅಪಾಯದ ಸ್ಥಿತಿಯಲ್ಲಿದೆ. ಸ್ಥಳೀಯರು ಇದೀಗ ಈ ಕಿಂಡಿ ಅಣೆಕಟ್ಟಿನಿಂದ ಸುಮಾರು ನೂರು ಮೀಟರ್ ದೂರದಲ್ಲಿ ಬೇರೊಂದು ಸಂಪರ್ಕ ದಾರಿ ನಿರ್ಮಿಸಿಕೊಂಡಿದ್ದು, ಸದ್ಯ ನೂತನ ಮತ್ತು ಶಾಶ್ವತ ಸೇತುವೆಯ ಬೇಡಿಕೆಯಿಟ್ಟಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ಅಂದ್ರಟ್ಟ ಎಂಬಲ್ಲಿ ಕೋಟಿಕಟ್ಟ ಎಂಬ ಹೆಸರಿನ ಹಳೆಯ ಕಿಂಡಿ ಅಣೆಕಟ್ಟು ರಕ್ಷಣಾ ಬೇಲಿಯಿಲ್ಲದೆ ಅಪಾಯದ ಸ್ಥಿತಿಯಲ್ಲಿದೆ. ಈ ಮಳೆಗಾಲದಲ್ಲಿ ಕೊಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಿಂಡಿ ಅಣೆಕಟ್ಟಿನ ದುರಸ್ತಿ ಸಹಿತ ರಕ್ಷಣಾ ಬೇಲಿ ನಿರ್ಮಿಸುವುದು ಸ್ಥಳೀಯರ ಬಹುಕಾಲದ ಬೇಡಿಕೆಯಾಗಿದೆ. ಬೇಡಿಕೆ ಈಡೇರುವುದಿಲ್ಲ ಎಂಬುದನ್ನು ಅರಿತ ಸ್ಥಳೀಯರು ಸ್ಥಳೀಯರೊಬ್ಬರ ಒಪ್ಪಿಗೆಯಂತೆ ಗದ್ದೆಯನ್ನು ಕಡಿದು ಒಳಗಿನಿಂದ ಪರ್ಯಾಯ ರಸ್ತೆ ನಿರ್ಮಿಸಿದ್ದಾರೆ.
ಅಂದ್ರಟ್ಟದಿಂದ ಕೂಡುರಸ್ತೆ, ಆನಡ್ಕ, ಶಾಂತಿಗೋಡು, ಬೊಳಿಂಜ, ದಾಸರಮೂಲೆ ಪುರುಷರಕಟ್ಟೆ ಪ್ರದೇಶವನ್ನು ಸಂಪರ್ಕಿಸುವ ಈ ಕಿಂಡಿ ಅಣೆಕಟ್ಟಿನಲ್ಲಿ ನೂರಾರು ವಿದ್ಯಾರ್ಥಿಗಳು ಆನಡ್ಕ, ಶಾಂತಿಗೋಡು ಪ್ರದೇಶದಿಂದ ಅಣೆಕಟ್ಟಿನ ಈ ಭಾಗದ ಜಿಡೆಕಲ್ಲು ಶಾಲಾ-ಕಾಲೇಜಿಗೆ ಬರುತ್ತಾರೆ. ಆದರೆ ಇದು ಮಳೆಗಾಲದಲ್ಲಿ ಸುರಕ್ಷಿತವಲ್ಲ.ಕಳೆದ ಮಳೆಗಾಲದಲ್ಲಿ ರಕ್ಷಣಾ ಬೇಲಿ ಇಲ್ಲದ ಈ ಕಿಂಡಿ ಅಣೆಕಟ್ಟಿನಲ್ಲಿ ನಡೆದು ಹೋಗುತ್ತಿದ್ದ ಕಾರ್ಮಿಕರೊಬ್ಬರು ಅಕಸ್ಮಾತ್ ಆಗಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿ ಪ್ರಾಣ ಕಳೆದುಕೊಂಡ ದುರ್ಘಟನೆ ಸಹ ಜರುಗಿದೆ.
ಮಳೆಗಾಲದ ಮುನ್ನ ಜನ ಸೇತುವೆ ನಿರ್ಮಾಣದ ಭರವಸೆಯಲ್ಲಿದ್ದಾರೆ. ಸೇತುವೆ ನಿರ್ಮಾಣ ಮಾಡಬೇಕೆಂದು ಶಾಸಕರು, ಜಿಲ್ಲಾಧಿಕಾರಿಗಳು, ಸ್ಥಳೀಯ ಗ್ರಾಪಂಗೆ ಈಗಾಗಲೇ ಹಲವಾರು ಬಾರಿ ಮನವಿಯನ್ನೂ ನೀಡಲಾಗಿದೆ. ಈ ಬೇಡಿಕೆ ಈಡೇರದಿದ್ದಲ್ಲಿ ಈ ಬಾರಿಯ ಮಳೆಗಾಲದಲ್ಲಿ ಸಂಪರ್ಕ ಕಡಿತಗೊಳ್ಳುವುದು ಗ್ಯಾರಂಟಿ.
ಇದೇ ಭಾಗದ ಪಂಜಿಗ ಎಂಬಲ್ಲಿ ಹೊಳೆಗೆ ಅಣೆಕಟ್ಟು ನಿರ್ಮಾಣದ ಅಗತ್ಯವಿದೆ. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಮುಖಾಂತರ ಕೆಆರ್‌ಡಿಸಿಲ್ ಹಾಗೂ ಸಣ್ಣ ನೀರಾವರಿ ಇಲಾಖೆಗೆ 2020 ರಲ್ಲಿ ತಲಾ ಎರಡು ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದೀಗ ಅಂದ್ರಟ್ಟ ಎಂಬಲ್ಲಿ ಹಳೆ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದರಿಂದ ಊರವರು ಸೇರಿ ಪರ್ಯಾಯವಾಗಿ ಹೊಸದಾದ ರಸ್ತೆ ನಿರ್ಮಿಸಿದ್ದಾರೆ ಅಂತಾರೆ ಶಾಸಕರು.
ಈಗಿರುವ ಕಿಂಡಿ ಅಣೆಕಟ್ಟು ಅಪಾಯದ ಸ್ಥಿತಿಯಲ್ಲಿರುವುದರಿಂದ ಇದರ ಬಳಕೆಯ ಆಸೆಯನ್ನು ನಾವು ಬಿಟ್ಟಿದ್ದೇವೆ. ಇದೀಗ ಊರವರು ಸೇರಿಕೊಂಡು ಪರ್ಯಾಯ ರಸ್ತೆಯನ್ನು ನಿರ್ಮಿಸಿದ್ದೇವೆ. ಈ ರಸ್ತೆ ನಿರ್ಮಾಣಕ್ಕೆ ಚಿಕ್ಕಮುಡ್ನೂರು ಗ್ರಾ.ಪಂ.ನವರು 70 ಸಾವಿರ ರೂ. ನೀಡಿದ್ದಾರೆ. ಉಳಿದ ಹಣವನ್ನು ಊರವರಿಂದ ಸಂಗ್ರಹಿಸಿದ್ದೇವೆ. ಕೂಡುರಸ್ತೆ, ಆನಡ್ಕ, ಪುರುಷರಕಟ್ಟೆ ಭಾಗದ ಜನರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಯಾರ್ಡ್ಗೆ ತರಲು ಈ ದಾರಿ ಹತ್ತಿರವಾಗಿದೆ. ಅಲ್ಲದೆ ಈ ಭಾಗದಲ್ಲಿ ಕೆಎಂಎಫ್ ಫ್ಯಾಕ್ಟರಿ, ಶಾಲಾ-ಕಾಲೇಜು ಇದೆ. ಆದ್ದರಿಂದ ಆದಷ್ಟು ಬೇಗ ಈಗಾಗಲೇ ನಿರ್ಮಿಸಿದ ನೂತನ ದಾರಿಗೆ ಸೇತುವೆ ನಿರ್ಮಿಸಿಕೊಡುವಂತೆ ಇಲ್ಲಿನ ನಿವಾಸಿಗಳು ಮನವಿ ಮಾಡಿದ್ದಾರೆ.