ಮಂಗಳೂರು : ನಗರದ ಹೊರವಲಯದ ವಾಮಂಜೂರು ತಿರುವೈಲಿನ ಮಶ್ರೂಮ್ ಫ್ಯಾಕ್ಟರಿಯನ್ನು ಎತ್ತಂಗಡಿ ಮಾಡುವಂತೆ ಆಗ್ರಹಿಸಿ ಇಂದಿನಿಂದ ಇಲ್ಲಿನ ಜನರು ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದ್ದಾರೆ. ಫ್ಯಾಕ್ಟರಿಯನ್ನು ಈ ಪ್ರದೇಶದಿಂದ ಸ್ಥಳಾಂತರ ಮಾಡಿಸಿ ಎಂದು ಮಂಗಳೂರಿನ ವಾಮಂಜೂರು -ತಿರುವೈಲ್ ವಾರ್ಡ್ ನಾಗರಿಕರು, ವೈಟ್ ಗ್ರೋವ್ ಅಗ್ರಿ ಎಲ್ಎಲ್ಪಿ ಮಶ್ರೂಮ್ ಫ್ಯಾಕ್ಟರಿಯ ವಿರುದ್ಧ ಮುಷ್ಕರ ನಡೆಸುತ್ತಿದ್ದಾರೆ.
ಸದಾ ಗಬ್ಬೆದ್ದು ನಾರುವ ಮಶ್ರೂಮ್ ಫ್ಯಾಕ್ಟರಿಯ ದುರ್ನಾತದಿಂದ ನಮಗೆ ಬದುಕಲು ಸಾಧ್ಯವಿಲ್ಲ. ನೆಮ್ಮದಿಯಾಗಿ ಊಟ ಮಾಡಲೂ ಆಗುತ್ತಿಲ್ಲ. ಉಬ್ಬಸ, ದಮ್ಮು, ಕೆಮ್ಮು, ಚರ್ಮ ವ್ಯಾಧಿಗಳಿಗೆ ಅನೇಕ ಮಂದಿ ತುತ್ತಾಗುತ್ತಿದ್ದಾರೆ. ಹೀಗಾಗಿ ಮಶ್ರೂಮ್ ಫ್ಯಾಕ್ಟರಿಯನ್ನು ಬಂದ್ ಮಾಡಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಚಾಕಲೇಟ್ ತಯಾರಕ ಸಂಸ್ಥೆ ಎಂದು ಈ ಫ್ಯಾಕ್ಟರಿಯನ್ನು ಸ್ಥಾಪಿಸಲಾಗಿತ್ತು. ಆ ಬಳಿಕ ಇಲ್ಲಿ ಮಶ್ರೂಮ್ ಬೆಳೆಸಲಾಗುತ್ತಿದೆ ಎಂದು ನಾಗರಿಕರಿಗೆ ತಿಳಿದು ಬಂದಿದೆ. ಈ ಫ್ಯಾಕ್ಟರಿಯಿಂದ ನಿತ್ಯವೂ ತಿರುವೈಲು ಸೇರಿದಂತೆ ವಾಮಂಜೂರು ವ್ಯಾಪ್ತಿಯಲ್ಲಿ ಗಬ್ಬು ವಾಸನೆ ಬರುತ್ತಿದೆ. ಜನವಸತಿ ಪ್ರದೇಶದಿಂದ ಫ್ಯಾಕ್ಟರಿಯನ್ನು ತೆರವು ಮಾಡಿಸಲು ಒಂದು ವರ್ಷದಿಂದ ನಾಗರಿಕರು ಹೋರಾಟ ಮಾಡುತ್ತಿದ್ದಾರೆ. ಆದರೆ ಈ ಹೋರಾಟಕ್ಕೆ ಯಾವ ಬೆಲೆಯೂ ಸಿಕ್ಕಿಲ್ಲ.
ಇದನ್ನೂ ಓದಿ : ಸಾರ್ವಜನಿಕರ ಕುಂದುಕೊರತೆ ಆಲಿಸಲು ಮಂಗಳೂರಿನಲ್ಲಿ ಮತ್ತೆ 'ಫೋನ್ ಇನ್' ಕಾರ್ಯಕ್ರಮ
ಫ್ಯಾಕ್ಟರಿ ಸ್ಥಗಿತಗೊಳಿಸುವಂತೆ ನಾಗರಿಕರು ಕಳೆದ ತಿಂಗಳು ಮಾರ್ಚ್ 20 ರಂದು ದೊಡ್ಡಮಟ್ಟದ ಪ್ರತಿಭಟನೆ ನಡೆಸಿದ್ದರು. ಫ್ಯಾಕ್ಟರಿಗೆ ಬೀಗ ಜಡಿಯುವಂತೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಮಾಹಿತಿ ತಿಳಿದು ಮಂಗಳೂರು ನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಗೇಟ್ಗೆ ಬೀಗ ಜಡಿದಿದ್ದರು. ಆ ಬಳಿಕವೂ ಪರಿಸ್ಥಿತಿ ಯಥಾರೀತಿಯಲ್ಲಿಯೇ ಮುಂದುವರಿದಿದೆ.
ಇದರಿಂದ ಸಿಡಿದೆದ್ದ ನಾಗರಿಕರು ಇಂದಿನಿಂದ ಫ್ಯಾಕ್ಟರಿ ಮುಚ್ಚುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ವಾಮಂಜೂರಿನಲ್ಲಿ ಫ್ಯಾಕ್ಟರಿಗೆ ಹೋಗುವ ದಾರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಸ್ಥಳೀಯ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ, ಆಟೋರಿಕ್ಷಾ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ ಗ್ಯಾರಂಟಿ ; ಖಾಸಗಿ ಬಸ್ನಲ್ಲೂ ಉಚಿತ ಪ್ರಯಾಣ ಅವಕಾಶಕ್ಕೆ ಕರಾವಳಿಗರ ಮನವಿ!
ಇನ್ನು ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸುವ ಮೊದಲೇ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಮುಷ್ಕರ ನಿರತರ ಮನವೊಲಿಕೆಗೆ ಯತ್ನಿಸಿದರು. ಆದರೆ ಮುಷ್ಕರ ನಿರತ ಜನರು ಮಾತ್ರ ಒಂದು ಚೂರೂ ಕದಲಲಿಲ್ಲ. ಅಲ್ಲದೇ ಸ್ಥಳಕ್ಕೆ ಜಿಲ್ಲಾಧಿಕಾರಿ ಕೂಡ ಆಗಮಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಜೊತೆಗೆ ಮಶ್ರೂಮ್ ಫ್ಯಾಕ್ಟರಿಯನ್ನು ತಕ್ಷಣ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಫೋಮ್ ಫ್ಯಾಕ್ಟರಿಯಲ್ಲಿ ಭಾರಿ ಅಗ್ನಿ ಅವಘಡ: ನಾಲ್ವರು ಕಾರ್ಮಿಕರು ಸಾವು, 6 ಮಂದಿಯ ಸ್ಥಿತಿ ಗಂಭೀರ