ಮಂಗಳೂರು : ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ತ್ಯಾಜ್ಯವನ್ನು ಹಸಿ ಹಾಗೂ ಒಣಕಸವೆಂದು ಪ್ರತ್ಯೇಕಿಸಿ ವಿಂಗಡಿಸುವುದು ಕಡ್ಡಾಯ. ಪಾಲಿಕೆಯ ವತಿಯಿಂದ ನಿತ್ಯ ಹಸಿಕಸ ಹಾಗೂ ಶುಕ್ರವಾರ ಒಣಕಸ ಸಂಗ್ರಹಿಸಲು ಅಕ್ಟೋಬರ್ 2ರಿಂದ ಕ್ರಮ ವಹಿಸಲಾಗುವುದು ಎಂದು ಮಂಗಳೂರು ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದರು.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಬಳಿಕ ಹಿಂದಿನ ಎಲ್ಲಾ ಯೋಜನೆಗಳು ಸ್ಥಗಿತವಾಗಿದ್ದವು. ಘನತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನ ವೈಜ್ಞಾನಿಕವಾಗಿ ನಿರ್ವಹಿಸುವುದು ಅಗತ್ಯವಾಗಿದೆ. ಇದೀಗ ಮತ್ತೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದರು.
ಎಲ್ಲಾ ವಾರ್ಡ್‌ಗಳಲ್ಲಿ ತ್ಯಾಜ್ಯವನ್ನು ಹಸಿಕಸ ಹಾಗೂ ಒಣಕಸವಾಗಿ ಪ್ರತ್ಯೇಕಿಸಿ ನೀಡದಿದ್ದಲ್ಲಿ ಮಹಾನಗರ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಹಾಗೂ ನಿರ್ಮಲೀಕರಣ ಬೈಲಾ 2019ರಂತೆ ದಂಡ ವಿಧಿಸಲು ಕ್ರಮವಹಿಸಲಾಗುತ್ತದೆ. ಬೀದಿಬದಿ ವ್ಯಾಪಾರಸ್ಥರು ಹಾಗೂ ಮನೆಗಳಲ್ಲಿ ತ್ಯಾಜ್ಯ ವಿಂಗಡಣೆ ಮಾಡದಿದ್ರೇ ₹1,500 ರಿಂದ 5 ಸಾವಿರವರೆಗೆ ದಂಡ, ಭಾರೀ ತ್ಯಾಜ್ಯ ಉತ್ಪಾದಕರು ತ್ಯಾಜ್ಯ ವಿಂಗಡಣೆ ಮಾಡದಿದ್ದಲ್ಲಿ ₹15 ಸಾವಿರದಿಂದ 25 ಸಾವಿರ ರೂ.ವರೆಗೆ ದಂಡ, ತೆರೆದ ಪ್ರದೇಶಗಳಲ್ಲಿ ತ್ಯಾಜ್ಯ ಎಸೆದಲ್ಲಿ 1,500 ರೂ. ನಿಂದ 25 ಸಾವಿರ ರೂ.ವರೆಗೆ ದಂಡ, ಬಯೋಮೆಡಿಕಲ್ ತ್ಯಾಜ್ಯ ಘನತ್ಯಾಜ್ಯದೊಂದಿಗೆ ಮಿಶ್ರಣಗೊಳಿಸಿದ್ರೆ 10 ಸಾವಿರ ರೂ.ನಿಂದ 25 ಸಾವಿರ ರೂ.ವರೆಗೆ ದಂಡ, ಕಟ್ಟಡ ಭಗ್ನಾವಶೇಷಗಳನ್ನು ತೆರೆದ ಪ್ರದೇಶಗಳಲ್ಲಿ ಎಸೆದಲ್ಲಿ 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಅಕ್ಷಯ್ ಶ್ರೀಧರ್ ಹೇಳಿದರು.
ಮನೆಯಲ್ಲಿಯೇ ಹಸಿಕಸವನ್ನು ವಿಲೇವಾರಿ ಮಾಡುವವರು ಮನಪಾದಲ್ಲಿ ಸಿಗುವ ಅರ್ಜಿ ಪಡೆದು ಭರ್ತಿ ಮಾಡಿ ನೀಡಿದಲ್ಲಿ, ಮನಪಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಅವರ ಮನೆಗೆ ಬಂದು ಹಸಿಕಸ ಕಾಂಪೋಸ್ಟ್ ಮಾಡುವುದನ್ನು ಪರಿಶೀಲನೆ ನಡೆಸುತ್ತಾರೆ. ಈ ಮೂಲಕ ಅವರಿಗೆ ಮುಂದೆ ತ್ಯಾಜ್ಯ ವಿಲೇವಾರಿಯ ತೆರಿಗೆಯಲ್ಲಿ ಶೇ.50 ವಿನಾಯಿತಿ ಇರಲಿದೆ. ಅದೇ ರೀತಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡುವ ಬಗ್ಗೆಯೂ ಆದಷ್ಟು ಶೀಘ್ರ ಮತ್ತೆ ಕಾರ್ಯಾಚರಣೆ ನಡೆಸಲಾಗುತ್ತದೆ.
ಫುಟ್ಪಾತ್ನಲ್ಲಿ ಮಾರಾಟ ಮಾಡುವವರ ವಿರುದ್ಧವೂ ಶೀಘ್ರದಲ್ಲೇ ಟೈಗರ್ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ಅಕ್ಷಯ್ ಶ್ರೀಧರ್ ಹೇಳಿದರು. ಈ ಸಂದರ್ಭ ಮಂಗಳೂರು ಮನಪಾ ಮೇಯರ್ ದಿವಾಕರ ಪಾಂಡೇಶ್ವರ, ಮಂಗಳೂರು ಮನಪಾ ಉಪ ಆಯುಕ್ತ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.