ಮಂಗಳೂರು: ಹಡಗಿನಿಂದ ಸಮುದ್ರಕ್ಕೆ ಸೋರಿಕೆಯಾಗುವ ತೈಲವನ್ನು ಪರಿಣಾಮಕಾರಿಯಾಗಿ ತೆಗೆಯಲು ಎಂಆರ್ಪಿಎಲ್ ಕಂಡು ಹುಡುಕಿರುವ ರಾಸಾಯನಿಕಕ್ಕೆ ಪೇಟೆಂಟ್ ದೊರಕಿದೆ.
ಭಾರತ ಸರ್ಕಾರದ ಪೇಟೆಂಟ್ ಕಚೇರಿಯು ಈ ಪೇಟೆಂಟ್ಅನ್ನು ನೀಡಿ ಈ ರಾಸಾಯನಿಕಕ್ಕೆ ಆರ್ಗಾನಿಕ್ ಜನರೇಟರ್ಸ್(organic generator) ಎಂಬ ಹೆಸರು ನೀಡಿದೆ. ಎಂಆರ್ ಪಿಎಲ್ ಗೆ ದೊರಕಿರುವ ಮೂರನೇ ಪೇಟೆಂಟ್ ಇದಾಗಿದೆ. ಈ ರಾಸಾಯನಿಕಕ್ಕೆ 375827 ಪೇಟೆಂಟ್ ಸಂಖ್ಯೆ ದೊರೆತಿದೆ.
ಪೇಟೆಂಟ್ ದೊರಕಿರುವ ಹಿನ್ನೆಲೆ ಎಂಆರ್ ಪಿಎಲ್ ಹೊರತುಪಡಿಸಿ ಬೇರೆ ಯಾರೂ ಕೂಡಾ ಈ ರಾಸಾಯನಿಕವನ್ನು ಉತ್ಪಾದನೆ ಮಾಡುವ, ಮಾರಾಟ ಮಾಡುವ ಹಕ್ಕು ಇರುವುದಿಲ್ಲ ಎಂದು ಎಂಆರ್ ಪಿಎಲ್ ಹೇಳಿದೆ.
ಹಡಗಿನಿಂದ ಸಮುದ್ರಕ್ಕೆ ಸೋರಿಕೆಯಾದ ತೈಲವನ್ನು ಘನರೂಪದ ಜೆಲ್ ವಸ್ತುವಾಗಿ ಪರಿವರ್ತಿಸಿ ತೈಲವು ಸಮುದ್ರದಲ್ಲಿ ಹರಡದಂತೆ ಮಾಡಬೇಕಾಗುತ್ತದೆ. ಅದಕ್ಕಾಗಿ ಎಂಆರ್ ಪಿಎಲ್ ಸೋರಿಕೆಯಾದ ತೈಲವನ್ನು ಪರಿಣಾಮಕಾರಿಯಾದ ಜೆಲ್ ರೂಪಕ್ಕೆ ಪರಿವರ್ತಿಸುವ ರಾಸಾಯನಿಕವನ್ನು ಕಂಡು ಹುಡುಕಿದೆ. ಇದು ಸಾವಯವ ಆಗಿದ್ದು, ಕಡಿಮೆ ವೆಚ್ಚ ತಗಲುವ ರಾಸಾಯನಿಕವಾಗಿದೆ. ಅಲ್ಲದೆ ಇದು ಬಹಳ ವೇಗವಾಗಿ ತೈಲವನ್ನು ಜೆಲ್ ರೂಪಕ್ಕೆ ಪರಿವರ್ತಿಸುತ್ತದೆ. 3-4% ರಾಸಾಯನಿಕವನ್ನು ಬಳಸುವುದರಿಂದ ಪರಿಸರಕ್ಕೂ ಯಾವುದೇ ಹಾನಿಯಾಗುವುದಿಲ್ಲ ಎಂದು ಎಂಆರ್ ಪಿಎಲ್ ಹೇಳಿದೆ.