ಮಂಗಳೂರು (ದ.ಕ): ಮೈಸೂರು ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ವಿಮಾನ ಸೇವೆಗೆ ಕೊನೆಗೂ ಮೂಹೂರ್ತ ಕೂಡಿಬಂದಿದೆ.
ಡಿಸೆಂಬರ್ 10 ರಿಂದ ಮಂಗಳೂರು ಮತ್ತು ಮೈಸೂರು ನಡುವೆ ವಿಮಾನ ಸೇವೆ ಆರಂಭಗೊಳ್ಳಲಿದೆ. ಏರ್ ಇಂಡಿಯಾದ ಅಲಯನ್ಸ್ ವಿಮಾನಯಾನ ಸಂಸ್ಥೆ ವಿಮಾನ ಸೇವೆ ಆರಂಭಿಸಲಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ.
ಮೈಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ವಿಮಾನ ಸಂಪರ್ಕ ಕಲ್ಪಿಸಲಾಗುತ್ತಿದೆ. ಭಾರತೀಯ ವಿಮಾನಯಾನ ಪ್ರಾಧಿಕಾರ ಮಂಗಳೂರು-ಮೈಸೂರು ನಡುವೆ ವಿಮಾನ ಹಾರಾಟಕ್ಕೆ ಅಕ್ಟೋಬರ್ 25 ರಂದೇ ಅನುಮತಿ ನೀಡಿತ್ತು. ಆದರೆ ಕಾರಣಾಂತರಗಳಿಂದಾಗಿ ಡಿಸೆಂಬರ್ 10 ರಿಂದ ವಿಮಾನ ಹಾರಾಟ ಆರಂಭವಾಗಲಿದೆ.
ವೇಳಾಪಟ್ಟಿ..
9ಐ-532 ವಿಮಾನ ಬೆಳಗ್ಗೆ 11.15ಕ್ಕೆ ಮೈಸೂರಿನಿಂದ ಹೊರಡಲಿದ್ದು, 12.15ಕ್ಕೆ ಮಂಗಳೂರು ತಲುಪಲಿದೆ. 9ಐ-533 ಸಂಖ್ಯೆಯ ವಿಮಾನ ಮಂಗಳೂರಿನಿಂದ 12.40ಕ್ಕೆ ಹೊರಡಲಿದ್ದು, 1.40ಕ್ಕೆ ಮೈಸೂರಿಗೆ ಆಗಮಿಸಲಿದೆ ಹಾಗೂ ಎರಡೂ ನಗರಗಳ ನಡುವೆ ವಿಮಾನಯಾನ ಸೇವೆ ಆರಂಭವಾಗುವುದರಿಂದ ಆರ್ಥಿಕತೆ, ವ್ಯಾಪಾರ ವಹಿವಾಟು ಸುಧಾರಿಸಬಹುದು. ಜೊತೆಗೆ ಸಂಪರ್ಕ ವ್ಯವಸ್ಥೆ ಸುಧಾರಿಸುವ ನಿರೀಕ್ಷೆ ಗರಗೆದರಿದೆ.
ಟ್ವಿಟರ್ ಮೂಲಕ ಸಂತಸ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ
ಮೈಸೂರಿನಿಂದ ಮಂಗಳೂರಿಗೆ ವಿಮಾನ ಸೇವೆಗೆ ಭಾರೀ ಬೇಡಿಕೆ ಇತ್ತು. ಸಾಂಸ್ಕೃತಿಕ ನಗರಿ ಹಾಗೂ ಕಡಲ ನಗರಿ ಮಂಗಳೂರು ನಡುವೆ ವಿಮಾನ ಸೇವೆ ಆರಂಭವಾಗುತ್ತಿರುವುದು ಬಹಳ ಸಂತೋಷದ ವಿಷಯ. ಇದರಿಂದ ಆರ್ಥಿಕಾಭಿವೃದ್ಧಿ ಅನುಕೂಲವಾಗುತ್ತದೆ ಎಂದಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ವಿಮಾನಯಾನ ರಾಜ್ಯ ಸಚಿವ ಹರ್ದೀಪ್ ಪುರಿ ಅವರಿಗೆ ಸಂಸದ ಪ್ರತಾಪ್ ಸಿಂಹ ಟ್ವಿಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ.