ಸುಳ್ಯ: ಸಹನೆ, ತಾಳ್ಮೆಯಿಂದ ಜನರ ಪ್ರೀತಿ ವಿಶ್ವಾಸ ಗಳಿಸುವ ಮೂಲಕ ಉನ್ನತ ಸ್ಥಾನಕ್ಕೆ ಏರಿದ ಸಚಿವ ಎಸ್.ಅಂಗಾರ ಅವರು ಕರ್ನಾಟಕಕ್ಕೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಗೌರವ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
ಕರ್ನಾಟಕ ಸರ್ಕಾರದ ಬಂದರು, ಮೀನುಗಾರಿಕೆ, ಒಳನಾಡು ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿದ ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದ ಮೈದಾನದಲ್ಲಿ ನಡೆದ ಹುಟ್ಟೂರಿನ ಸಾರ್ವಜನಿಕ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
![Paid honour to Minister S. Angara](https://etvbharatimages.akamaized.net/etvbharat/prod-images/kn-dk-03-honering-av-pho-kac10008_25012021220407_2501f_1611592447_1032.jpg)
ಸಮಾರಂಭದಲ್ಲಿ ಸಚಿವ ಎಸ್. ಅಂಗಾರ ಅವರನ್ನು ಅಭಿನಂದಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಜನಪ್ರತಿನಿಧಿಯಾಗಿ ಅಂಗಾರರ ಸುದೀರ್ಘ ಅನುಭವವು ಇಡೀ ಕರ್ನಾಟಕ ರಾಜ್ಯಕ್ಕೆ ದೊರೆಯಲಿದೆ. ಅಂಗಾರರು ರಾಜ್ಯದ ಶ್ರೇಷ್ಠ ಸಚಿವರಾಗಿ ಮೂಡಿ ಬರಲಿ ಎಂದು ಆಶಿಸಿದರು.
ಸರಳ ವ್ಯಕ್ತಿತ್ವದ ಅಂಗಾರ ಅವರಂತಹ ಸಾಮಾನ್ಯ ವ್ಯಕ್ತಿಯೋರ್ವ ಸಚಿವ ಸ್ಥಾನ ಅಲಂಕರಿಸಿರುವುದು ಪ್ರಜಾಪ್ರಭುತ್ವದ ನಿಜವಾದ ಶೋಭೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಎಸ್.ಅಂಗಾರ ಅವರು ಸಚಿವ ಸ್ಥಾನ ಸುಳ್ಯದ ಜನತೆಗೆ ಸಿಕ್ಕಿದ ಗೌರವ ಎಂದು ಬಣ್ಣಿಸಿದರು. ಕ್ಷೇತ್ರದ ಜನರ ನಿರೀಕ್ಷೆಯ ಬಗ್ಗೆ ಮತ್ತು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸ್ಪಷ್ಟವಾದ ಕಲ್ಪನೆ ಇದೆ. ಆ ನಿರೀಕ್ಷೆಗೆ, ಕಲ್ಪನೆಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುತ್ತೇನೆ. ಶಾಸಕನಾಗಿ, ಸಚಿವನಾಗಿ ಇರುವ ಹೊಣೆಗಾರಿಕೆಯ ಬಗ್ಗೆ ಸ್ಪಷ್ಟತೆ ಇದೆ. ಪಕ್ಷದ ಜೊತೆಗಿನ ಬದ್ಧತೆ, ಹಿರಿಯರ ಆಶೀರ್ವಾದದಿಂದ ಬೆಳೆದ ತನ್ನನ್ನು ಹಿಂದಿನ ನೆನಪು ಇನ್ನಷ್ಟು ಗಟ್ಟಿಯಾಗಿಸುತ್ತದೆ ಎಂದು ಹೇಳಿದರು.