ಬಂಟ್ವಾಳ(ದಕ್ಷಿಣ ಕನ್ನಡ): ಬೋಳುಗುಡ್ಡೆಯಲ್ಲಿ ಜೀವಜಲವನ್ನು ಏಕಾಂಗಿಯಾಗಿ ತರಿಸಿದ ಭಗೀರಥ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಅಮೈ ಮಹಾಲಿಂಗ ನಾಯ್ಕ ಅವರಿಗೆ ಪದ್ಮಶ್ರೀ ಗೌರವ ಅರಸಿ ಬಂದಿದೆ.
ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ನಿವಾಸಿ 77ರ ಹರೆಯದ ಮಹಾಲಿಂಗ ನಾಯ್ಕ ಕರಾವಳಿಯ ಪ್ರಮುಖ ಕೃಷಿ ಸಾಧಕ. ಕೃಷಿಗೆ ನೀರು ಹಾಯಿಸಲು ಪಂಪ್ ಸೆಟ್ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಸುರಂಗ ನೀರಿನ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟು, ಇದೇ ವ್ಯವಸ್ಥೆಯಲ್ಲಿ ವಿದ್ಯುತ್ ರಹಿತವಾಗಿ ಗ್ರಾವಿಟಿ ನೆರವಿನಲ್ಲಿ ಕೃಷಿಗೆ ತುಂತುರು ನೀರಾವರಿ, ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆ ಕಲ್ಪಿಸಿರುವ ನಾಯ್ಕ ಅವರು ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದವರು.
ಇಳಿಜಾರು ಬೋಳು ಗುಡ್ಡೆಯಲ್ಲಿ ಕೃಷಿ ಮಾಡುವ ಸಾಹಸಕ್ಕೆ ಹೊರಟ ಮಹಾಲಿಂಗ ನಾಯ್ಕ ಅವರು ಸುರಂಗ ತೋಡಿದ ಯಶೋಗಾಥೆಗೆ ಈ ಪ್ರಶಸ್ತಿ ಲಭಿಸಿದೆ. ಸಮೃದ್ಧ ನೀರು ಪಡೆದ ಅವರು ನೀರಿನ ಸಂಪನ್ನತೆಯಿಂದ ತೋಟ ಮಾಡಿದ್ದಾರೆ. ಭತ್ತ, ಅಡಕೆ, ತೆಂಗು ಬಾಳೆ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ದಲಿತ ಕವಿ ದಿ. ಸಿದ್ದಲಿಂಗಯ್ಯ ಸೇರಿ ಕರ್ನಾಟಕದ ಐವರಿಗೆ ಪದ್ಮಶ್ರೀ ಪುರಸ್ಕಾರ
ಮಡದಿ ಲಲಿತಾ, ಮೂವರು ಮಕ್ಕಳು ಇವರಿಗೆ ಸಾಥ್ ನೀಡಿದ್ದಾರೆ. ಇವರು ಸಾಲಕ್ಕಾಗಿ ಯಾವುದೇ ಬ್ಯಾಂಕ್ ಮೊರೆ ಹೋಗಿಲ್ಲ. ಕೃಷಿಯಲ್ಲಿ ದೊರೆತ ಆದಾಯದಿಂದ ಸ್ವಂತ ಮನೆ ಕಟ್ಟಿದ್ದಾರೆ. ಮನೆಗೆ ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳು ಇವೆ. ಶಾಲಾ ಕಾಲೇಜುಗಳ ಮೆಟ್ಟಿಲು ಹತ್ತದ ಛಲಗಾರ ಮಹಾಲಿಂಗ ನಾಯ್ಕರಿಗೆ ದುಡಿಮೆ ಎಲ್ಲವನ್ನು ನೀಡಿದೆ. ಅವರಿಗೆ ಮಂಗಳೂರು ಪ್ರೆಸ್ ಕ್ಲಬ್ 2018ರಲ್ಲಿ ವರ್ಷದ ವ್ಯಕ್ತಿ ಗೌರವ ನೀಡಿತ್ತು. ಇದಾದ ಬಳಿಕ ಹಲವು ಪ್ರಶಸ್ತಿ ಪುರಸ್ಕಾರಗಳು ದೊರೆತವು. ಇದೀಗ ಪದ್ಮಪ್ರಶಸ್ತಿಯ ಗೌರವ ಸಂದಿರುವುದು ದಕ್ಷಿಣ ಕನ್ನಡ ಜಿಲ್ಲೆ ಮತ್ತು ರಾಜ್ಯದ ಕೀರ್ತಿಯನ್ನು ಹೆಚ್ಚಿಸಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ