ಬೆಳ್ತಂಗಡಿ : ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಹಿನ್ನೆಲೆ ಸೀಲ್‌ಡೌನ್ ಆಗಿದ್ದ ಬಡಾವಣೆಯ 16 ಮನೆಯವರು ಸೇರಿ ಗಿಡ ನೆಟ್ಟು ಕೊರೊನಾ ಮುಕ್ತರಾಗಿದ್ದೇವೆ ಎಂಬ ಸಂದೇಶ ಸಾರಿದ್ದಾರೆ.
ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡ್ಲಾಡಿ ಬಡಾವಣೆಯೊಂದರ 16 ಮನೆಗಳಿರುವ ಈ ಕಾಲೋನಿಯ 12 ಮನೆಗಳ ಸುಮಾರು 36 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆ ಈ ಪ್ರದೇಶವನ್ನು ಮೇ 20ರಂದು ಸೀಲ್‌ಡೌನ್ ಮಾಡಲಾಗಿತ್ತು. 17 ದಿನಗಳ ಬಳಿಕ ಸೀಲ್‌ಡೌನ್ ತೆರವುಗೊಳಿಸಲಾಗಿದೆ.
ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಈ ಬಡಾವಣೆಯ ಜನರೆಲ್ಲ ಸೇರಿ ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಇವರ ಮಾರ್ಗದರ್ಶನದಲ್ಲಿ ಬಡಾವಣೆ ಪಕ್ಕದ ಸ್ಮಶಾನದ ಸುತ್ತಮುತ್ತ ಹಣ್ಣು ಹಾಗೂ ಇತರ ಗಿಡಗಳನ್ನು ಪ್ರತಿ ಮನೆಗೊಂದರಂತೆ ನೆಟ್ಟು ತಾವು ಕೊರೊನಾ ಮುಕ್ತರಾಗಿದ್ದೇವೆ ಎಂಬ ಸಂದೇಶವನ್ನು ಸಮಾಜಕ್ಕೆ ಸಾರಿದ್ದಾರೆ.
ಈ ಬಗ್ಗೆ ಮಾತನಾಡಿದ ಗ್ರಾಪಂ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ, ಕಳೆದ 17 ದಿನಗಳ ಹಿಂದೆ ಸೀಲ್‌ಡೌನ್ ಆಗಿದ್ದ ಈ ಪ್ರದೇಶದ ಎಲ್ಲರೂ ಕೊರೊನಾ ಮುಕ್ತರಾಗಿದ್ದಾರೆ. ಕಂಟೋನ್ಮೆಂಟ್ ಝೋನ್ ತೆರವಾಗಿದೆ.
ಜೂನ್ 5 ವಿಶ್ವ ಪರಿಸರ ದಿನದಂದು ಸಮಾಜಕ್ಕೆ ಮಾದರಿಯಾಗುವಂತಹ ಸಂದೇಶ ನೀಡಬೇಕು ಎಂಬ ಯೋಚನೆಯಲ್ಲಿ ಸಸಿ ನೆಟ್ಟು ಕೊರೊನಾ ಗೆದ್ದ ಸಂಭ್ರಮ ಆಚರಿಸಿಕೊಳ್ಳಲು ಒಂದು ಮಾದರಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ಪರಿಸರ ರಕ್ಷಿಸಿ ಮರ-ಗಿಡಗಳನ್ನು ಪೋಷಿಸಿ ಎಂಬ ಸಂದೇಶವನ್ನು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಸ್ಮಶಾನ ಹಾಗೂ ಪರಿಸರದ ಸುತ್ತಮುತ್ತ ಹಣ್ಣಿನ ಹಾಗೂ ಇತರ ಕೆಲವು ಗಿಡಗಳನ್ನು ನೆಟ್ಟಿದ್ದೇವೆ.
ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅವರಲ್ಲಿ ಗಿಡ ನೀಡುವ ಬಗ್ಗೆ ಮನವಿ ಮಾಡಿದಾಗ ಸಂತೋಷದಿಂದ ಒಪ್ಪಿ ಗಿಡ ನೀಡಿದ್ದಾರೆ. ಅದಲ್ಲದೆ ಸಹಕರಿಸಿದ ಅರಣ್ಯಪಾಲಕ ರಾಘವೇಂದ್ರ ಪ್ರಸಾದ್ ಇವರಿಗೂ ಧನ್ಯವಾದ ಎಂದರು.
ಸೀಲ್‌ಡೌನ್ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರಾದ ನಮ್ಮ ಪಡ್ಲಾಡಿಯ ಕೆಲವರನ್ನು ಆಸ್ಪತ್ರೆಗೆ, ಕೋವಿಡ್ ಕೇರ್ ಸೆಂಟರ್ಗೆ ದಾಖಲಿಸಲು ಉಚಿತವಾಗಿ ಆ್ಯಂಬುಲೆನ್ಸ್ ಸೇವೆ ನೀಡಿದ ನಮ್ಮ ಶಾಸಕರ "ಶ್ರಮಿಕ ಸ್ಪಂದನಾ" ತಂಡಕ್ಕೆ, ಪ್ರತಿದಿನ ಆರೋಗ್ಯದ ಮಾಹಿತಿ ಗಮನಿಸುತಿದ್ದ ಆರೋಗ್ಯ ಸಹಾಯಕಿಯರಿಗೆ, ಆಹಾರ ಕಿಟ್ ನೀಡಿದ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೆ ವಾರ್ಡಿನ ಪರವಾಗಿ ಧನ್ಯವಾದ ಎಂದರು.
ಸ್ಥಳೀಯರಾದ ಯಮುನಾ ಪ್ರತಿಕ್ರಿಯಿಸಿ, ಪಡ್ಲಾಡಿಯಲ್ಲಿ ಸಸಿ ನೆಡುವ ಮಾದರಿ ಕಾರ್ಯಕ್ರಮವನ್ನು ಇಂದು ವಿಶ್ವ ಪರಿಸರ ದಿನಾಚರಣೆಯ ಈ ಶುಭ ದಿನದಂದು ಮಾಡುತಿದ್ದೇವೆ. ಇದನ್ನು ಆಯೋಜಿಸಿದ ನಮ್ಮ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಸಾದ್ ಶೆಟ್ಟಿಯವರಿಗೆ ಅಭಿನಂದನೆಗಳು. ಒಳ್ಳೆಯ ಗಾಳಿ, ಸ್ವಚ್ಛ ಪರಿಸರದಿಂದ ಆರೋಗ್ಯ ಉತ್ತಮವಾಗಿರಲು ಸಾಧ್ಯ. ಮುಂದೆಯೂ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದರು.