ಬಂಟ್ವಾಳ (ದಕ್ಷಿಣಕನ್ನಡ): ವಿವಿಧ ಬೇಡಿಕೆ ಈಡೇರಿಕೆಗಾಗಿ ಕಳೆದ 10 ದಿನಗಳಿಂದ ಮನೆಯಲ್ಲಿದ್ದು ಮುಷ್ಕರ ನಡೆಸುತ್ತಿದ್ದ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಇಂದು ಬಂಟ್ವಾಳದ ಬಿ.ಸಿ. ರೋಡ್ನ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿ ಮಾತನಾಡಿದ ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಹಗಲು-ರಾತ್ರಿಯೆನ್ನದೇ ದುಡಿಯುತ್ತಿರುವ ಆರೋಗ್ಯ ಸಿಬ್ಬಂದಿಯ ಬದುಕಿನಲ್ಲಿ ಸರ್ಕಾರ ಚೆಲ್ಲಾಟವಾಡುತ್ತಿದೆ. ಶಾಸಕರು, ಸಚಿವರು, ಸಂಸದರ ವೇತನ ಹೆಚ್ಚಾಗಬೇಕಾದರೆ ಅರ್ಧ ಗಂಟೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅವರು ನಿವೃತ್ತಿಯ ಬಳಿಕವೂ ಸಾವಿರಗಟ್ಟಲೇ ಸಂಬಳ ಪಡೆಯುತ್ತಾರೆ. ಆದರೆ, ಬದುಕುವುದಕ್ಕಾಗಿ ವೇತನ ಕೇಳುತ್ತಿರುವ ಸಿಬ್ಬಂದಿಯ ಕುರಿತು ಸರ್ಕಾರದ ನಿರ್ಲಕ್ಷ್ಯದ ಧೋರಣೆ ಖಂಡನೀಯ ಎಂದು ಆರೋಪಿಸಿದರು.
ಇದೇ ವೇಳೆ ಅಕ್ಟೋಬರ್ 6ರವರೆಗೆ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ತಿಳಿಸಿದರು.