ಮಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಯ ಬಳಿಕ ಕಂಬಳ ಆಯೋಜನೆಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ, ಕಾಸರಗೊಡು, ಉಡುಪಿ ಜಿಲ್ಲಾ ಕಂಬಳ ಸಮಿತಿಯು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್ ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ವೇಳೆ ಈ ರೀತಿ ಹೇಳಿದ್ದಾರೆ. ಧಾರ್ಮಿಕ ನಂಬಿಕೆ ಮತ್ತು ಕೃಷಿ ಸಂಸ್ಕೃತಿಯನ್ನೊಳಗೊಂಡ ತುಳುನಾಡಿನ ಜಾನಪದ ಕ್ರೀಡೆ ಕಂಬಳ ನಡೆಸಲು ಜಿಲ್ಲಾಡಳಿತ ಸಿದ್ಧವಿದೆ. ಅಲ್ಲದೆ ಕಂಬಳಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ದೇಶಾದ್ಯಂತ ಈಗಾಗಲೇ ಬಹುತೇಕ ಅನ್‌ಲಾಕ್ ಆಗಿದ್ದು, ವ್ಯಾಪಾರ-ವಹಿವಾಟು ಯಥಾಸ್ಥಿತಿಗೆ ಮರಳುತ್ತಿವೆ. ಸದ್ಯದ ಪರಿಸ್ಥಿತಿ ಅವಲೋಕಿಸಿ ಕೇಂದ್ರದಿಂದ ಮತ್ತೊಂದು ಮಾರ್ಗಸೂಚಿ ಬರಲಿದೆ. ಆ ಬಳಿಕ ಕಂಬಳವನ್ನು ಯಾವ ರೀತಿ ಆಯೋಜನೆ ಮಾಡಬಹುದು ಎಂಬ ನಿರ್ಧಾರ ಪ್ರಕಟಿಸಲಾಗುವುದು ಎಂದು ಹೇಳಿದರು.
ಜಾನಪದ ಕ್ರೀಡೆ ಕಂಬಳದ ಹಿಂದೆ ದೈವಾರಾಧನೆ, ಕೃಷಿ ವೈಭವವಿದ್ದು, ಇದನ್ನು ಪ್ರವಾಸೋದ್ಯಮದ ನೆಲೆಯಲ್ಲೂ ಪರಿಗಣಿಸಲಾಗುತ್ತಿದೆ. ಕರಾವಳಿ ಆರ್ಥಿಕತೆಗೂ ಕಂಬಳ ಸಹಕಾರಿಯಾಗಿದೆ. ಕಂಬಳ ಆಯೋಜನೆ ವಿಚಾರದಲ್ಲಿ ಕಂಬಳ ಸಮಿತಿಗೆ ಸಂಪೂರ್ಣ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಸಂಸದ ನಳಿನ್ ಕುಮಾರ್ ತಿಳಿಸಿದರು.