ಪುತ್ತೂರು (ದಕ್ಷಿಣ ಕನ್ನಡ): ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ನಾಲ್ವರು ಯುವಕರ ಗಡಿಪಾರಿಗೆ ಶಿಫಾರಸು ಮಾಡಿರುವುದಕ್ಕೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಟುವಾಗಿ ಖಂಡಿಸುತ್ತದೆ ಎಂದು ಸಂಘಟನೆಯ ದಕ್ಷಿಣ ಪ್ರಾಂತ ಸಹ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ ತಿಳಿಸಿದರು.
ಪುತ್ತೂರು ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆ ನಾಲ್ವರ ವಿರುದ್ಧ ನಗರ ಠಾಣೆಯಲ್ಲಿ ಯಾವುದೇ ಪ್ರಕರಣಗಳಿಲ್ಲ. ಆದರೂ ಗಡಿಪಾರಿಗೆ ಶಿಫಾರಸು ಮಾಡಿ ನೋಟಿಸ್ ನೀಡಲಾಗಿದೆ. ಅವರು ರೌಡಿಸಂ, ಕೋಮುವಾದ ಹಾಗೂ ಅಶಾಂತಿ ಮಾಡಿರುವುದೇ ಆಗಿದ್ದಲ್ಲಿ ಅದರ ಬಗ್ಗೆ ಸ್ಪಷ್ಟಪಡಿಸಲಿ ಎಂದು ಹಸಂತಡ್ಕ ಒತ್ತಾಯಿಸಿದರು.
ರಿಕ್ಷಾ ಚಾಲಕ ದಿನೇಶ್ ತಿಂಗಳಾಡಿ, ಎಲೆಕ್ಟ್ರಿಷಿಯನ್ ಪ್ರಜ್ವಲ್ ಸಂಪ್ಯ, ಕೂಲಿ ಕಾರ್ಮಿಕರಾದ ನಿಶಾಂತ್ ತಿಂಗಳಾಡಿ ಹಾಗೂ ಪ್ರದೀಪ್ ಅಜಲಡ್ಕ ಎಂಬುವರನ್ನು ಬಾಗಲಕೋಟೆಗೆ ಗಡಿಪಾರಿಗೆ ಶಿಫಾರಸು ಮಾಡಲಾಗಿದೆ. ನಾವು ಇದನ್ನು ಉಗ್ರವಾಗಿ ಖಂಡಿಸುತ್ತೇವೆ. ಆ ನಾಲ್ವರು ಯಾವುದೇ ಅಶಾಂತಿ ಸೃಷ್ಠಿಸುವ ಪ್ರಕರಣದಲ್ಲಿ ಭಾಗಿಗಳಾಗಿಲ್ಲ. ಆದರೂ ನೀಡಿರುವ ನೋಟಿಸ್ನಲ್ಲಿ ನಾಲ್ವರು ಕೋಮುವಾದಿ, ರೌಡಿಸಂ, ಅಶಾಂತಿ ಸೃಷ್ಟಿಸುವಲ್ಲಿ ಭಾಗಿಗಳಾಗಿದ್ದಾರೆ ಎಂದು ಉಲ್ಲೇಖಿಸಿ ಶಿಫಾರಸು ನೀಡಲಾಗಿದೆ. ಇದನ್ನು ಖಂಡಿಸುವ ಮೂಲಕ ನಾವು ನ್ಯಾಯ ಕೇಳುತ್ತೇವೆ. ಇಲಾಖೆಯ ಮೇಲಧಿಕಾರಿಗಳು, ಗೃಹ ಸಚಿವರು ಈ ಬಗ್ಗೆ ಗಮನ ಹರಿಸಬೇಕು. ಅಶಾಂತಿ, ರೌಡಿಸಂ ನಿಲ್ಲಿಸುವುದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ. ಆದರೆ, ಇಂತಹದ್ದನ್ನು ನಾವು ಖಂಡಿಸುತ್ತೇವೆ ಎಂದರು.
ಗಡಿಪಾರು ಮಾಡಿರುವ ವಿಚಾರಕ್ಕೆ ಸಂಬಂಧಿಸಿ ನವೆಂಬರ್ 22ಕ್ಕೆ ವಿಚಾರಣೆ ಹಾಜರಾಗುವಂತೆ ಸಹಾಯಕ ಆಯುಕ್ತರಿಂದ ನೋಟಿಸ್ ಬಂದಿದೆ. ಈ ಘಟನೆಯ ಮೇಲೆ ವಕೀಲರ ಮೂಲಕ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಾಗುವುದು. ಗಡಿಪಾರು ಮಾಡಲು ಆಯಾ ಠಾಣಾ ವ್ಯಾಪ್ತಿಯವರು ಮಾಡಬೇಕು. ಆದರೆ, ಈಗಾಗಲೇ ಗಡಿಪಾರಿಗೆ ಶಿಫಾರಸು ಮಾಡಲಾದ ನಾಲ್ವರು ನಗರ ಠಾಣಾ ವ್ಯಾಪ್ತಿಯವರಲ್ಲ ಎಂದು ಮುರಳಿಕೃಷ್ಣ ಹಸಂತಡ್ಕ ಇದೇ ವೇಳೆ ಹೇಳಿದರು.