ಮಂಗಳೂರು: ದ.ಕ.ಜಿಲ್ಲೆಯಾದ್ಯಂತ ಇಂದು ಬೆಳಗ್ಗೆಯಿಂದ ಮಳೆ ಮತ್ತಷ್ಟು ಬಿರುಸು ಪಡೆದಿರುವುದರಿಂದ ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಆದ್ದರಿಂದ ನದಿ ತೀರದಲ್ಲಿ ವಾಸಿಸುವ ನಾಗರಿಕರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ.
ಉಪ್ಪಿನಂಗಡಿಯಿಂದ ಮಂಗಳೂರುವರೆಗೆ ನೇತ್ರಾವತಿ ನದಿಯ ತೀರದಲ್ಲಿ ವಾಸಿಸುವ ಎಲ್ಲರೂ ತಮ್ಮ ತಮ್ಮ ಕುಟುಂಬದೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ನದಿ ತೀರದ ಪ್ರಮುಖ ಸಂಭಾವ್ಯ ಅಪಾಯ ಸ್ಥಳಗಳಲ್ಲಿ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ. ಎರಡು ಎನ್ಡಿಆರ್ಎಫ್ ತಂಡ ಮಂಗಳೂರು ಹಾಗೂ ಸುಳ್ಯದಲ್ಲಿ ಬೀಡು ಬಿಟ್ಟಿದೆ ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗೂಡಿನ ಬಳಿ ಸ್ಥಳೀಯ ಯುವಕರು ಪಾಣೆ ಮಂಗಳೂರಿನ ಹಳೆ ಸೇತುವೆಯಿಂದ ಸಾಹಸ ತೋರಿಸಲಿಕ್ಕಾಗಿ ಹಾರದಂತೆ ದ.ಕ ಜಿಲ್ಲಾ ಎಸ್ ಪಿ ಲಕ್ಷ್ಮೀಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಯುವಕರಿಗೆ ಈಜು ಬರುತ್ತದೆಯಾದರೂ ಇಂತಹ ದುಸ್ಸಾಹಸ ಮಾಡುವುದು ಬೇಡ. ಈ ಬಗ್ಗೆ ಯುವಕರ ಮನೆಯವರಿಗೂ ತಿಳಿಸಲಾಗಿದೆ. ಇದು ಮುಂದುವರಿದರೆ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದರು. ಮುಂದೆ ಈ ರೀತಿ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿಯನ್ನು ಅಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.