ಮಂಗಳೂರು: ದ.ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಬೆಳಗ್ಗೆ 7ಗಂಟೆಯಿಂದ ಮಧ್ಯಾಹ್ನ 12ಗಂಟೆಯವರೆಗೆ ಸಾರ್ವಜನಿಕರಿಗೆ ದಿನಸಿ ಸಾಮಗ್ರಿ ಖರೀದಿಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಜಿಲ್ಲೆಯಲ್ಲಿ 3 ದಿನಗಳ ಕಟ್ಟುನಿಟ್ಟಿನ ಬಂದ್ ಬಳಿಕ ಇಂದು ಅಗತ್ಯ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿತ್ತು. ಆದರೆ, ಇಂದು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ನಾಳೆಯಿಂದ ದಿನಸಿ ಸಾಮಗ್ರಿ ಖರೀದಿಗೆ ಅವಕಾಶ ನೀಡಬೇಕು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ನಗರದ ಹಂಪನಕಟ್ಟೆಯಲ್ಲಿರುವ ಸೆಂಟ್ರಲ್ ಮಾರುಕಟ್ಟೆ ಹಾಗೂ ಸುರತ್ಕಲ್ ಮಾರುಕಟ್ಟೆಯಲ್ಲಿ ಜನನಿಬಿಡ ಪ್ರದೇಶವಾಗುವ ಹಿನ್ನೆಲೆಯಲ್ಲಿ ಈ ಎರಡೂ ಮಾರುಕಟ್ಟೆಗೂ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಚಿಲ್ಲರೆ ವ್ಯಾಪಾರಸ್ಥರು ಈ ಎರಡೂ ಮಾರುಕಟ್ಟೆಯಲ್ಲಿ ಸಾಮಗ್ರಿಗಳನ್ನು ಖರೀದಿ ಮಾಡಿ ಸಾರ್ವಜನಿಕರಿಗೆ ವಿತರಣೆ ಮಾಡಬೇಕು ಎಂದು ಹೇಳಿದರು.
ಪ್ರಾವಿಷನ್ ಸ್ಟೋರ್ ಅಥವಾ ಸೂಪರ್ ಮಾರುಕಟ್ಟೆಗಳಲ್ಲಿ ಅಗತ್ಯ ಸಾಮಗ್ರಿ ಖರೀದಿಯ ಸಂದರ್ಭದಲ್ಲಿ ಸರತಿ ಸಾಲು ಉಂಟಾದಲ್ಲಿ ಸಾಮಾಜಿಕ ಅಂತರ ಕಾಯುವ ಹಿನ್ನೆಲೆ ಅಂಗಡಿ ಮಾಲೀಕರು ಖರೀದಿದಾರರ ಹೆಸರು ದೂರವಾಣಿ ಸಂಖ್ಯೆ ಹಾಗೂ ಸಾಮಗ್ರಿ ಪಟ್ಟಿ ಪಡೆದು ದಿನಸಿ ಸಾಮಗ್ರಿ ಸಿದ್ಧಪಡಿಸಿ ಆ ಬಳಿಕ ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಬೇಕು. ಈ ಮೂಲಕ ಜನತೆ ಮನೆಯಲ್ಲಿದ್ದೇ ಸಹಕಾರ ನೀಡಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದರು. ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.