ಪುತ್ತೂರು: ದೇಶದಲ್ಲಿ ಲಾಕ್‌ಡೌನ್ ಇದ್ದರೂ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಡೆದ ಸಂಪೂರ್ಣ ಬಂದ್ ನಿಯಮವನ್ನು ಮಂಗಳವಾರ ಸಡಿಲಿಕೆ ಮಾಡಿರುವುದು ಜನತೆಯನ್ನು ಬಂಧನದಿಂದ ಬಿಡಿಸಿದಂತಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆ ತನಕ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿತ್ತು. ಆದರೆ ಈ ಅವಕಾಶವನ್ನು ಜನತೆ ಬಹುತೇಕ ದುರುಪಯೋಗ ಪಡಿಸಿಕೊಂಡಿದ್ದು ಕಂಡುಬಂತು.
ಪುತ್ತೂರು ನಗರದಲ್ಲಿ ಜನಜಾತ್ರೆಯೇ ನೆರೆದಿದ್ದು, ನಿಯಮ, ನಿರ್ಬಂಧಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿತ್ತು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಆದೇಶ ನೀಡಿದ್ದರೂ ಜನತೆ ಈ ಯಾವ ಆದೇಶ, ನಿಯಮಗಳಿಗೂ ಮನ್ನಣೆ ನೀಡಲಿಲ್ಲ. ಅಧಿಕಾರಿಗಳು ಸೂಚಿಸಿದ ನಿಯಮಗಳಿಗೆ ಜನತೆ ಮಾತ್ರವಲ್ಲ ವರ್ತಕರೂ ತಲೆ ಕೆಡಿಸಿಕೊಳ್ಳಲಿಲ್ಲ. ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಜನತೆ ಅಂಗಡಿಗಳಲ್ಲಿ ಮುಗಿಬೀಳುತ್ತಿರುವುದು ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬಂತು.
ಪೊಲೀಸರ ಶ್ರಮ ವ್ಯರ್ಥ:
ಕಳೆದ ಮೂರು ದಿನಗಳಿಂದ ಪುತ್ತೂರು ತಾಲೂಕಿನಾದ್ಯಂತ ಜನ ಸಂಚಾರವನ್ನು ನಿಯಂತ್ರಿಸಿದ್ದ ಪೊಲೀಸರು ಮಂಗಳವಾರ ಅಸಹಾಯಕರಾಗಿದ್ದರು. ನಗರಕ್ಕೆ ತಂಡೋಪತಂಡವಾಗಿ ಬರುತ್ತಿದ್ದ ಜನತೆಯನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗದೆ ಪರದಾಡುವಂತಾಯಿತು. ಒಂದು ಕುಟುಂಬದಿಂದ ಕೇವಲ ಒಬ್ಬ ಸದಸ್ಯ ಮಾತ್ರ ಬಂದು ದಿನಸಿ ವಸ್ತುಗಳನ್ನು ಖರೀದಿ ಮಾಡಬೇಕು ಎಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ ತಮ್ಮ ದೊಡ್ಡ ದೊಡ್ಡ ಕಾರುಗಳಲ್ಲಿ ಮನೆ ಮಂದಿಯನ್ನು ಕುಳ್ಳಿರಿಸಿಕೊಂಡು ಬಂದು ಪೇಟೆ ತಿರುಗಾಡುವ ಮಂದಿ ಸರ್ಕಾರದ ಆದೇಶವನ್ನು ಸಂಪೂರ್ಣ ನಿರ್ಲಕ್ಷಿಸಿದರು. ಇದನ್ನು ಕಂಡು ಪೊಲೀಸ್ ಅಧಿಕಾರಿಗಳೇ ತಮ್ಮ ನೋವನ್ನು ಪತ್ರಕರ್ತರ ಮುಂದೆ ತೋಡಿಕೊಂಡರು.
ಸಂಪೂರ್ಣ ವಿಫಲ:
ಬಂದ್ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ನಿರ್ಬಂಧ ಸಡಿಲಿಕೆ ಸಂಪೂರ್ಣ ವಿಫಲವಾಯಿತು. ಸರಿಯಾಗಿ ಚಿಂತನೆ ನಡೆಸದೆ, ಪೂರ್ವ ತಯಾರಿಗಳಿಲ್ಲದೆ ನಡೆದ ಈ ಸಡಿಲಿಕೆಯಿಂದ ಕೊರೊನಾ ಭೀತಿ ಮತ್ತಷ್ಟು ಹೆಚ್ಚಾಗುವಂತಾಯಿತು. ರೋಗ ಭೀತಿಯ ಆತಂಕವೇ ಇಲ್ಲದಂತೆ ವರ್ತಿಸಿದ ಜನತೆಯಿಂದ ಹಾಗೂ ಆದೇಶ-ನಿಯಮಗಳನ್ನು ಲೆಕ್ಕಸದ ವರ್ತಕರಿಂದ ಜಿಲ್ಲಾಡಳಿತದ ಚಿಂತನೆ ಯಶಸ್ಸು ಕಾಣಲಿಲ್ಲ.