ಮಂಗಳೂರು: ಕೊರೊನಾ ಸೋಂಕಿನ ಭೀತಿಯಿಂದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ. ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರ ಆದೇಶದಂತೆ, ಮಾರ್ಚ್ ತಿಂಗಳಿನ ಮೂರನೇ ವಾರದ ಬಳಿಕ ಚರ್ಚ್ಗೆ ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸುವುದನ್ನು ನಿರ್ಬಂಧಿಸಲಾಗಿತ್ತು. ಇದೀಗ ಅನ್ಲಾಕ್ ಬಳಿಕ ಶನಿವಾರದಿಂದ ಮಂಗಳೂರು ಧರ್ಮಪ್ರಾಂತ್ಯದ ಎಲ್ಲಾ ಚರ್ಚ್ಗಳಲ್ಲಿ ಭಕ್ತರು ಆಗಮಿಸಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಸರ್ಕಾರದ ನಿಯಮದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಭಕ್ತರ ಆಗಮನಕ್ಕೆ ಅವಕಾಶ ನೀಡಲಾಗಿದೆ.
ಈ ಹಿನ್ನೆಲೆ ಮಂಗಳೂರಿನ ರೊಸಾರಿಯೋ ಕೆಥೆಡ್ರಲ್ನಲ್ಲಿಯೂ ಭಕ್ತರ ಪ್ರಾರ್ಥನೆಗೆ ಅವಕಾಶ ನೀಡಲಾಗಿದೆ. ಇದೀಗ ಸರ್ಕಾರದ ಆದೇಶ ಪಾಲಿಸುವ ಸಲುವಾಗಿ ಚರ್ಚ್ನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಪ್ರಾರ್ಥನೆಗೆ ಬರುವ ಭಕ್ತರು ಆನ್ಲೈನ್ ಮೂಲಕ ತಮ್ಮ ಸಮಯವನ್ನು ನಿಗದಿಪಡಿಸಬೇಕಾಗಿದೆ. ಚರ್ಚ್ ಪ್ರವೇಶಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಅಲ್ಲದೆ ಚರ್ಚ್ ಪ್ರವೇಶದ್ವಾರದಲ್ಲಿಯೇ ಇರುವ ಸ್ಪರ್ಶ ರಹಿತ ಸ್ಯಾನಿಟೈಸರ್ನಲ್ಲಿ ಕೈಗಳನ್ನು ಶುಚಿಗೊಳಿಸಿ, ಸ್ಕ್ರೀನಿಂಗ್ಗೆ ಒಳಪಟ್ಟು ಪ್ರಾರ್ಥನೆಗೆ ಆಗಮಿಸಬೇಕಾಗಿದೆ. ಅಲ್ಲದೆ ಬರುವವರು ತಮ್ಮ ಹೆಸರು, ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ದಾಖಲಿಸಬೇಕು. ಕೋವಿಡ್ ಸೋಂಕು ಹರಡದಂತೆ ಇರುವ ಚರ್ಚ್ನ ನಿಯಮ ಪಾಲನೆ ಬಗ್ಗೆ ಅಲ್ಲದೆ ರೆಕಾರ್ಡೆಡ್ ಧ್ವನಿ ಸಂಯೋಜನೆ ಮೂಲಕ ಭಕ್ತರಿಗೆ ಅರಿವು ಮೂಡಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.
ರೊಸಾರಿಯೋ ಕೆಥೆಡ್ರಲ್ನಲ್ಲಿ ಸಾಮಾನ್ಯವಾಗಿ ಒಂದು ಬಾರಿ ಸುಮಾರು 600 ಮಂದಿಗೆ ಪ್ರಾರ್ಥನೆ ಮಾಡುವಷ್ಟು ಸ್ಥಳಾವಕಾಶ ಇದೆ. ಆದರೆ ಇದೀಗ ಸರ್ಕಾರದ ಆದೇಶ ಪಾಲಿಸುವ ಸಲುವಾಗಿ ಚರ್ಚ್ ಆಡಳಿತ ಮಂಡಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಕೇವಲ ಒಂದು ಸಲಕ್ಕೆ 70 ಮಂದಿಗೆ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಿದೆ. ಎಲ್ಲರೂ ಸಾಕಷ್ಟು ಅಂತರ ಕಾಯ್ದುಕೊಂಡು ಪೂಜೆ, ಪ್ರಾರ್ಥನೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ರೊಸಾರಿಯೋ ಕೆಥೆಡ್ರಲ್ನ ಧರ್ಮಗುರು ಫಾ.ಜೆ.ಬಿ. ಕ್ರಾಸ್ತಾ ಮಾತನಾಡಿ, ನಮ್ಮ ಚರ್ಚ್ನ ಪಾಲನಾ ಸಮಿತಿಯ ಒಳಗೆ 450 ಮನೆಗಳಿದ್ದು, ಅದನ್ನು 16 ವಾರ್ಡ್ಗಳಾಗಿ ವಿಂಗಡಿಸಲಾಗಿದೆ. ಈ 16 ವಾರ್ಡ್ಗಳ ಎಲ್ಲರಿಗೂ ಪ್ರಾರ್ಥನೆಯಲ್ಲಿ ಅವಕಾಶ ನೀಡುವಂತೆ ಶನಿವಾರ ಒಂದು ಹಾಗೂ ರವಿವಾರದಂದು ಮೂರು ಪೂಜೆಗಳನ್ನು ಇರಿಸಲಾಗಿದೆ. ಈ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ ಎಂದು ಹೇಳಿದರು.
ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಚರ್ಚ್ನಲ್ಲಿ ಪ್ರಾರ್ಥನೆ ನೆರವೇರಿಸಲು ಅವಕಾಶ ನೀಡಲಾಗುತ್ತಿದೆ. ಆನ್ಲೈನ್ನಲ್ಲಿಯೇ ಪ್ರಾರ್ಥನೆಗೆ ಕುಳಿತುಕೊಳ್ಳಲು ಸೀಟಿಂಗ್ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಅವರಿಗೆ ನೀಡಿರುವ ಸೀಟ್ ಸಂಖ್ಯೆಯಲ್ಲಿಯೇ ಕುಳಿತುಕೊಳ್ಳಲು ವ್ಯವಸ್ಥೆ ಇದೆ. ಎಲ್ಲರಿಗೂ 6 ಅಡಿಗಳ ಅಂತರ ಕಾಯ್ದುಕೊಂಡೇ ಪ್ರಾರ್ಥನೆ ನೆರವೇರಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರತೀ ಪೂಜೆ ಆದ ಬಳಿಕ ಇಡೀ ಚರ್ಚ್ನ್ನು ಸ್ಯಾನಿಟೈಸೇಷನ್ ಮಾಡುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರೊಸಾರಿಯೋ ಕೆಥೆಡ್ರಲ್ ಭಕ್ತೆ ಐಡಾ ಫುಟಾರ್ಡೊ ಮಾತನಾಡಿ, ಕೊರೋನಾ ಲಾಕ್ಡೌನ್ನಿಂದ ಚರ್ಚ್ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಇಂದು ಚರ್ಚ್ಗೆ ಬಂದು ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿರುವುದಕ್ಕೆ ದೇವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಶುಭ ದಿನಕ್ಕಾಗಿ ಕಳೆದ ಎರಡುವರೆ ತಿಂಗಳಿನಿಂದ ಬಹಳಷ್ಟು ಕಾಯುತ್ತಿದ್ದೆವು. ನಮಗೆ ದೇವರ ಸ್ತುತಿ ಮಾಡಲು ಖಂಡಿತಾ ಅಡಚಣೆ ಆಗಿರಲಿಲ್ಲ. ಆದರೆ ಈ ಪವಿತ್ರ ಸ್ಥಳದಲ್ಲಿ ಪರಮ ಪ್ರಸಾದ ಸ್ವೀಕರಿಸಲು ಖಂಡಿತಾ ಸಂತೋಷವಾಗುತ್ತಿದೆ. ಈ ಮೂಲಕ ಕೊರೊನಾ ಮಾಹಾಮಾರಿಯ ಸಂಕಷ್ಟದಿಂದ ನಮ್ಮ ಇಡೀ ಜಗತ್ತನ್ನು ಪಾರು ಮಾಡು ಎಂದು ಪ್ರಭು ಏಸುಕ್ರಿಸ್ತನಲ್ಲಿ ಬೇಡುತ್ತೇನೆ ಎಂದರು.