ಮಂಗಳೂರು: ಕೇರಳ-ಕರ್ನಾಟಕದ ತಲಪಾಡಿ ಅಂತರ್ ರಾಜ್ಯ ಗಡಿಯನ್ನು ತುರ್ತು ಚಿಕಿತ್ಸೆಗೆ ತೆರೆಯಲು ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೆಲವೊಂದು ಮಾನದಂಡದ ಅನುಗುಣವಾಗಿ ವೈದ್ಯಕೀಯ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಒಪ್ಪಿದೆ.
ಕೇವಲ ಅತ್ಯಂತ ತುರ್ತು ಚಿಕಿತ್ಸೆ ಹಾಗೂ ರಸ್ತೆ ಅಪಘಾತದ ಚಿಕಿತ್ಸೆಗೆ ಸರ್ಕಾರಿ ಆ್ಯಂಬುಲೆನ್ಸ್ ಗಳಲ್ಲಿ ರೋಗಿಯನ್ನು ಕರೆ ತರಲು ಅನುಮತಿ ಇರುತ್ತದೆ. ಚಿಕಿತ್ಸೆಗೆ ಬರುವ ರೋಗಿಯು ಕೋವಿಡ್ ಸೋಂಕಿತ ಅಲ್ಲ ಎಂದು ಹಾಗೂ ಸದರಿ ಚಿಕಿತ್ಸೆಯು ಕಾಸರಗೋಡಿನಲ್ಲಿ ಲಭ್ಯವಿಲ್ಲ ಎಂದು ಕಾಸರಗೋಡು ಸ್ಥಳೀಯ ವೈದ್ಯಾಧಿಕಾರಿ ದೃಢೀಕರಣ ನೀಡಬೇಕು.
ರೋಗಿಯನ್ನು ತರುವ ಆ್ಯಂಬುಲೆನ್ಸ್ ಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ನಿರ್ದೇಶನದಂತೆ ಸ್ಯಾನಿಟೈಸ್ ಮಾಡುವುದು.
ರೋಗಿಯೊಡನೆ ಓರ್ವನೇ ಸಹಾಯಕ, ಚಾಲಕ ಹಾಗೂ ಓರ್ವ ಪ್ಯಾರಮೆಡಿಕ್ಸ್ ಸಿಬ್ಬಂದಿಯನ್ನ ಮಾತ್ರ ಕರೆತರಲು ಅವಕಾಶ ನೀಡಲಾಗಿದೆ. ಅಲ್ಲದೆ ತಲಪಾಡಿ ಗಡಿಯಲ್ಲಿ ವೈದ್ಯಕೀಯ ತಂಡ ನಿಯೊಜಿಸಲಾಗಿದ್ದು, ಕಾಸರಗೋಡಿನಿಂದ ಬರುವ ಆ್ಯಂಬುಲೆನ್ಸ್ ಹಾಗೂ ರೋಗಿಯನ್ನು ಪ್ರಥಮ ಹಂತದ ದಾಖಲೆಗಳನ್ನು ನಿಗದಿತ ಚೆಕ್ ಲಿಸ್ಟ್ ನಲ್ಲಿ ಪರಿಶೀಲನೆ ನಡೆಸಿದ ಬಳಿಕವೇ ಜಿಲ್ಲೆಯೊಳಗೆ ಪ್ರವೇಶ ನೀಡಲಾಗುವುದು.
ಈ ಎಲ್ಲಾ ಮಾನದಂಡಗಳನ್ನು ತಲಪಾಡಿ ಗಡಿಯಲ್ಲಿ ಪಾಲಿಸಲು ದ.ಕ.ಜಿಲ್ಲಾಧಿಕಾರಿ ಕಾಸರಗೋಡು ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದ್ದಾರೆ.