ಪುತ್ತೂರು: ಮಗುವಿನ ಭವಿಷ್ಯದ ಕನಸಿಗೆ ಯಾವುದೇ ನೈಸರ್ಗಿಕ ವಿಕೋಪ, ಮಹಾಮಾರಿ ರೋಗಗಳ ರೀತಿಯ ಅಡಚಣೆಗಳು ಅಡ್ಡಿಯಾಗದಂತೆ ನನಸಾಗಿಸುವ ದೂರದೃಷ್ಟಿಯೊಂದಿಗೆ ಎಲ್ಲ ಖಾಸಗಿ ಶಾಲೆಗಳು ಈಗಾಗಲೇ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿವೆ.
ಇದೇ ಮಾದರಿಯಲ್ಲಿ ಆನ್‌ಲೈನ್ ತರಗತಿ ನಡೆಸಲು ಸರ್ಕಾರಿ ಶಾಲೆಗಳು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದು, ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ವಿದ್ಯಾಗಮ ಯೋಜನೆಯ ಅಡಿಯಲ್ಲಿ ಅಭ್ಯಾಸ ಪರಿಕರಗಳನ್ನು ಮಕ್ಕಳ ಮನೆಗೆ ತಲುಪಿಸುವ ಯೋಜನೆ ಆರಂಭಿಸಿದೆ. ಪುತ್ತೂರಿನಲ್ಲಿ ಇದರ ಅನುಷ್ಠಾನ ಯಶಸ್ವಿಯಾಗಿ ವಠಾರ ಶಾಲೆಯ ಕಾನ್‌ಸೆಪ್ಟ್ನಲ್ಲಿ ನಡೆಯುತ್ತಿದೆ.
ಆದರೆ ಇಂಟರ್‌ನೆಟ್ ಸೌಕರ್ಯವಿಲ್ಲದ ಸಾವಿರಾರು ಮನೆಗಳು ಗ್ರಾಮೀಣ ಪ್ರದೇಶದಲ್ಲಿರುವ ಕಾರಣ ಆನ್‌ಲೈನ್ ಶಿಕ್ಷಣ ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದರ ಒಳಮರ್ಮವನ್ನು ಅರಿಯಲು ಇಲಾಖೆಯು ಡಿಜಿಟಲ್ ಸೌಲಭ್ಯಗಳ ಸಮೀಕ್ಷೆ ಕೈಗೆತ್ತಿಕೊಂಡಿದೆ. ವಿದ್ಯಾಗಮ ಯೋಜನೆಯ ಅಡಿಯಲ್ಲಿ ಅಭ್ಯಾಸ ಪರಿಕರಗಳನ್ನು ನಾನಾ ವಿಧಾನದ ಮೂಲಕ ಜಾರಿಗೊಳಿಸಬಹುದು ಎಂಬ ಸೂಚನೆ ನೀಡಲಾಗಿದ್ದು, ಪುತ್ತೂರು ತಾಲೂಕಿನಲ್ಲಿ ವಠಾರ ಶಾಲೆ ಎಂಬ ಪರಿಕಲ್ಪನೆಯನ್ನು ಅಭ್ಯಾಸ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಕಡಬ ತಾಲೂಕಿನ ನೂಜಿಬಾಳ್ತಿಲ ಕ್ಲಸ್ಟರ್ ಮಟ್ಟದಲ್ಲಿ ವಠಾರ ಶಾಲೆ ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದು, ಸುಮಾರು 628 ವಿದ್ಯಾರ್ಥಿಗಳು ಪ್ರಾಯೋಗಿಕ ತರಗತಿಯ ಮೂಲಕ ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಡಿಜಿಟಲ್ ಸೌಕರ್ಯಗಳ ಸಮೀಕ್ಷೆ ವಿದ್ಯಾಗಮ ಯೋಜನೆಯ ಅಡಿಯಲ್ಲಿ ಪುತ್ತೂರು ತಾಲೂಕಿನಲ್ಲಿ ವಿದ್ಯಾರ್ಥಿಗಳ ಡಿಜಿಟಲ್ ಸೌಲಭ್ಯಗಳ ಸಮೀಕ್ಷೆ ನಡೆಸಲಾಗಿದೆ. ಆರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರು ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ಗೂಗಲ್ ಮೀಟ್ ಮೂಲಕ ನಡೆಸಿದ್ದು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳ ಸಭೆಯನ್ನೂ ಇದೇ ಮಾದರಿಯಲ್ಲಿ ನಡೆಸಿದ್ದಾರೆ. ನಂತರದ ಹಂತದಲ್ಲಿ ಸ್ಟೂಡೆಂಟ್ ಡಿಜಿಟಲ್ ಕಮ್ಯುನಿಕೇಶನ್ ಎಂಟ್ರಿ ಮಾನಿಟರಿಂಗ್ ರಿಪೋರ್ಟ್ ತಯಾರಿಸಲಾಗಿದೆ. ಇದಕ್ಕಾಗಿ ಎಲ್ಲ ಕ್ಲಸ್ಟರ್ ಮಟ್ಟದಲ್ಲಿ ಸಮೀಕ್ಷೆ ನಡೆಸಲಾಗಿದೆ. ಆಯಾ ಕ್ಲಸ್ಟರ್ ವ್ಯಾಪ್ತಿಯಲ್ಲಿ 2ರಿಂದ 10ನೇ ತರಗತಿಯವರೆಗೆ ಇರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ, ಯಾರ ಮನೆಯಲ್ಲಿ ಟಿವಿ, ರೇಡಿಯೋ ಇದೆ, ಯಾರ ಮನೆಯಲ್ಲಿ ಸ್ಮಾರ್ಟ್ ಮೊಬೈಲ್ ಫೋನ್ ಇದೆ, ಯಾರ ಮನೆಯಲ್ಲಿ ಸಾದಾ ಮೊಬೈಲ್ ಮಾತ್ರ ಇದೆ, ಯಾರ ಮನೆಯಲ್ಲಿ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಸೌಲಭ್ಯವಿದೆ ಎಂಬುದನ್ನೆಲ್ಲ ಈ ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ.
ಕೋವಿಡ್-19 ಪರಿಣಾಮದಿಂದ ಬದಲಾದ ಸನ್ನಿವೇಶದಲ್ಲಿ 'ವಿದ್ಯಾಗಮ' ಕಾರ್ಯಕ್ರಮ ಶಿಕ್ಷಣ ಲೋಕದಲ್ಲಿ ಶಿಕ್ಷಕರಲ್ಲಿ ಮತ್ತು ಮಕ್ಕಳಲ್ಲಿ ನೈತಿಕ ಸ್ಥೈರ್ಯ, ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬುವುದರ ಜತೆಗೆ ಮಕ್ಕಳ ನಿರಂತರ ಕಲಿಕೆಗೆ ಸಹಾಯ ಮಾಡುವ ಪ್ರೇರಣಾ ಕಾರ್ಯಕ್ರಮವಾಗಿದೆ. ರೆಗ್ಯುಲರ್ ಸ್ಕೂಲ್ ತೆರೆಯಲು ಆಗಿಲ್ಲ. ಹಾಗಾಗಿ ವಿದ್ಯಾಗಮ ಮೂಲಕ ಶಿಕ್ಷಕರು ಮನೆಗೆ ತೆರಳಿ ವಿದ್ಯಾರ್ಥಿಗಳನ್ನು ಸಂಪರ್ಕಿಸಲಾಗುವುದು. ಶಿಕ್ಷಣದ ನಿರಂತರತೆಯನ್ನು ಕಾಪಾಡಿಕೊಂಡು ಬರುವ ನಿಟ್ಟಿನಲ್ಲಿ ಶಾಲೆಯಿಂದ ದೂರ ಇರುವ ಮಕ್ಕಳನ್ನು ತಲುಪಲಾಗುತ್ತಿದೆ. ಇದಕ್ಕಾಗಿ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ ಮಾಡಲಾಗಿದ್ದು, ಮೂರು ದಿನಗಳಲ್ಲಿ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರಿಗೆ ಸಾಪ್ಟ್ ಕಾಪಿ ಕೊಡುವ ಮೂಲಕ ಶಿಕ್ಷಕರು ವಠಾರ ಶಾಲೆಯ ಕಾನ್‌ಸೆಪ್ಟ್ ಮೂಲಕ ನಿರಂತರ ಮಕ್ಕಳ ಸಂಪರ್ಕದಲ್ಲಿರುತ್ತಾರೆ. ಇಲ್ಲಿ ಪ್ರತೀ ಮಗುವನ್ನು ಭೇಟಿ ಮಾಡುವ ಕಾರ್ಯ ನಡೆಯುತ್ತದೆ. ಈಗಾಗಲೇ ಶಿಕ್ಷಕರು ಮನೆ ಮನೆ ಭೇಟಿ ಮೂಲಕ ಯಾವ ವಿದ್ಯಾರ್ಥಿಗಳ ಮನೆಯಲ್ಲಿ ಯಾವ ಮೊಬೈಲ್, ರೇಡಿಯೋ, ಟಿ.ವಿ ಸಲಕರಣೆಗಳು ಇವೆ ಅಥವಾ ಇಲ್ಲ ಇದರ ಪೂರ್ಣ ಸರ್ವೆ ಮಾಡಿದ್ದಾರೆ. ಯಾವುದೇ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳಿಗೆ ಸಲಕರಣೆಗಳನ್ನು ತಲುಪಿಸುವ ಕೆಲಸವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ತಿಳಿಸಿದ್ದಾರೆ.