ಮಂಗಳೂರು: ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಮತ್ತು ಮಂಗಳೂರು ನಡುವಿನ KSRTC ಮತ್ತು ಎಲ್ಲಾ ಖಾಸಗಿ ಬಸ್ಗಳ ಸಂಚಾರವನ್ನು ಇಂದಿನಿಂದ ಅಗಸ್ಟ್ 07 ರವರೆಗೆ ನಿರ್ಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.
ಕೇರಳದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ತಡೆಯಲು ಕಾಸರಗೋಡು- ಮಂಗಳೂರು ನಡುವಿನ ಬಸ್ ಸಂಚಾರ ರದ್ದು ಸೇರಿದಂತೆ ಹಲವು ಕ್ರಮಗಳಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ದಿನಂಪ್ರತಿ ಪ್ರಯಾಣಿಸುವವರು, ಕಾಲೇಜು ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದಿದ್ದರೂ (2 ಡೋಸ್ ಆಗಿದ್ದರೂ ) 72 ಗಂಟೆಗಳ ಒಳಗೆ ಮಾಡಿಸಿರುವ RT - PCR ಪರೀಕ್ಷೆಯ ನೆಗಟಿವ್ ವರದಿಯ ಆಧಾರದಲ್ಲಿ 7 ದಿನಗಳ ಅವಧಿಗೆ ಅನುಮತಿಸಲಾಗುವುದು. ಕೇರಳದಿಂದ / ಮಹಾರಾಷ್ಟ್ರದಿಂದ, ಇತರ ಹೊರ ರಾಜ್ಯದಿಂದ ನರ್ಸಿಂಗ್ / ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು RT PCR ಪರೀಕ್ಷೆಯ ನೆಗೆಟಿವ್ ವರದಿ ತುರುವುದರ ಜೊತೆಗೆ ಮಂಗಳೂರಿಗೆ ಬಂದ ಬಳಿಕ ಒಂದು ವಾರದ ಕಡ್ಡಾಯ ಕ್ವಾರಂಟೈನ್ ಗೆ ಒಳಪಡಬೇಕಾಗಿದೆ.
ಏಳು ದಿನದ ಬಳಿಕ ಮತ್ತೊಮ್ಮೆ ಕೋವಿಡ್ ತಪಾಸಣೆಗೆ ಒಳಪಡಬೇಕು. RT - PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ತರದೇ ರೈಲು ಮೂಲಕ ಗಡಿ ಪ್ರವೇಶಿಸಿದ ವ್ಯಕ್ತಿಗಳು ರೈಲ್ವೇ ಸ್ಟೇಷನ್ಗಳಲ್ಲಿ ಕೋವಿಡ್ ತಪಾಸಣೆಗೆ ಒಳಪಡಬೇಕು. ತಪಾಸಣೆಯ ವೇಳೆ ಪಾಸಿಟಿವ್ ಬಂದಲ್ಲಿ / ವರದಿ ಬರುವವರೆಗೆ ಕೋವಿಡ್ ಕೇರ್ ಸೆಂಟರ್ನಲ್ಲಿ ಕ್ವಾರಂಟೈನ್ ಆಗುವುದು ಕಡ್ಡಾಯವಾಗಿರುತ್ತದೆ .
ಈ ಬಗ್ಗೆ ಸಂಬಂಧಪಟ್ಟ ತಹಶೀಲ್ದಾರರು ಕೋವಿಡ್ ಕೇರ್ ಸೆಂಟರ್ ತೆರೆಯಲು ಕ್ರಮ ವಹಿಸುಬೇಕು. ಚೆಕ್ ಪೋಸ್ಟ್ಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ 24 x 7 ತಪಾಸಣೆ ನಡೆಸುವ ಬಗ್ಗೆ ಸಂಬಂಧಪಟ್ಟ ಉಪ ವಿಭಾಗಧಿಕಾರಿ ಹಾಗೂ ಉಪ ಪೊಲೀಸ್ ಅಧೀಕ್ಷಕರು ಆಗಾಗ್ಗೆ ಸ್ಥಳಕ್ಕೆ ಭೇಟಿ ನೀಡಿ ಖಾತ್ರಿಪಡಿಸಿಕೊಳ್ಳಬೇಕು .ವೈದ್ಯಕೀಯ ತುರ್ತು ಸೇವೆ , ಆ್ಯಂಬುಲೆನ್ಸ್ ಹಾಗೂ ಅಂತರ್ರಾಜ್ಯ ಸರಕು ಸಾಮಾಗ್ರಿಗಳ ಸಾಗಾಟಕ್ಕೆ ಮೇಲ್ಕಂಡ ನಿರ್ಬಂಧವು ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಇನ್ನು ಜಿಲ್ಲೆಯಾದ್ಯಂತ ಎಲ್ಲಾ ಸಾಮಾಜಿಕ ,ರಾಜಕೀಯ , ಸಾಂಸ್ಕೃತಿಕ ,ಧಾರ್ಮಿಕ ಕಾರ್ಯಕ್ರಮಗಳು , ಸಮಾರಂಭಗಳು ಹಾಗೂ ಉತ್ಸವಗಳನ್ನು ನಿರ್ಬಂಧಿಸಲಾಗಿದೆ . ಮದುವೆಯನ್ನು ಗರಿಷ್ಠ 50 ಜನರ ಪರಿಮಿತಿಗೊಳಪಟ್ಟು ಸ್ಥಳೀಯ ಆಡಳಿತದ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆದು ಆಯೋಜಿಸಲು ಅನುಮತಿಸಿದೆ . ಸ್ಥಳೀಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ಅಧಿಕಾರಿಗಳು ಸಮಾರಂಭಕ್ಕೆ ಭೇಟಿ ನೀಡಿ ಕೋವಿಡ್ ನಿಯಮಾವಳಿ ಉಲ್ಲಂಘನೆ ಆಗದಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಪೂಜಾ ಸ್ಥಳಗಳಾದ ದೇವಾಲಯಗಳು , ಮಸೀದಿಗಳು, ಚರ್ಚುಗಳು, ಗುರುದ್ವಾರಗಳು ಮತ್ತು ಇತರ ಧಾರ್ಮಿಕ ಸ್ಥಳಗಳಲ್ಲಿ ಜಾತ್ರೆಗಳನ್ನು ಧಾರ್ಮಿಕ ಉತ್ಸವಗಳು, ಮೆರವಣಿಗೆಗಳನ್ನು ನಿರ್ಬಂಧಿಸಿದೆ .
ಇದನ್ನು ಓದಿ:'ಕೇರಳದಿಂದ ದ.ಕ ಜಿಲ್ಲೆಗೆ ಪ್ರತಿನಿತ್ಯ ಬರುವವರು 7 ದಿನಕ್ಕೊಮ್ಮೆ ನೆಗೆಟಿವ್ ರಿಪೋರ್ಟ್ ತೋರಿಸಬೇಕು'