ಸುಬ್ರಮಣ್ಯ: ನೈಋತ್ಯ ರೈಲ್ವೇ ಮೈಸೂರು ವಿಭಾಗವು ಮೈಸೂರು ನಿಲ್ದಾಣದಲ್ಲಿ ಪ್ರಾರಂಭಿಸಿದ್ದ ‘ಒಂದು ನಿಲ್ದಾಣ ಒಂದು ಉತ್ಪನ್ನ’ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು ಹಾಗೂ ಬಂಟ್ವಾಳ ರೈಲ್ವೆ ನಿಲ್ದಾಣಗಳಿಗೆ ವಿಸ್ತರಿಸಿದೆ. ರೈಲ್ವೆ ನಿಲ್ದಾಣಗಳಲ್ಲಿ ಸ್ಥಳೀಯವಾಗಿ ದೊರೆಯುವ ವಿಶೇಷ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಒದಗಿಸುವ ಮೂಲಕ ಅವುಗಳನ್ನು ಉತ್ತೇಜಿಸುವುದು ಮತ್ತು ಆ ಪ್ರದೇಶದ ವಿಶೇಷ ವಸ್ತುವನ್ನು ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ನಲ್ಲಿ ಪ್ರಚಾರ ಪಡಿಸುವುದು ಈ ಯೋಜನೆಯ ಉದ್ದೇಶ.
ರೈಲು ಪ್ರಯಾಣಿಕರಿಗೆ ಭಾರತದ ಕರಕುಶಲ ವಸ್ತುಗಳು, ಗ್ರಾಮೀಣ ಪಾರಂಪರಿಕ ವಸ್ತುಗಳನ್ನು ಪರಿಚಯಿಸುವ ಸಲುವಾಗಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಪರಿಚಯಿಸಿ ಜನಪ್ರಿಯಗೊಳಿಸುವುದು ಈ ಯೋಜನೆಯ ಗುರಿ. ಈ ಮೂಲಕ ಗ್ರಾಮೀಣ ಭಾಗದಲ್ಲಿ ಮತ್ತು ಸಮಾಜದಲ್ಲಿ ಕೆಳಸ್ತರದಲ್ಲಿರುವ ಜನರಿಗೆ ಹೆಚ್ಚುವರಿ ಆದಾಯದ ಅವಕಾಶಗಳನ್ನು ಸೃಷ್ಟಿಸುವ ಆಶಯದಿಂದ 2022-23ರ ಕೇಂದ್ರ ಬಜೆಟ್‌ನಲ್ಲಿ ಈ ಒಂದು ನಿಲ್ದಾಣ ಒಂದು ಉತ್ಪನ್ನ ಎಂಬ ಯೋಜನೆ ಘೋಷಿಸಲಾಗಿತ್ತು.
ಯಾವುದೇ ಅಧಿಕೃತ ಸಂಸ್ಥೆಗಳು ಆಸಕ್ತಿ ಹೊಂದಿದ್ದರೆ ಅವರು ರೈಲ್ವೆ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, 30.06.2022 ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಮಂಗಳೂರಿನಲ್ಲಿದೆ ದೇಶದ ಮೊದಲ ರಾತ್ರಿ ಪ್ರೌಢಶಾಲೆ: 80 ವರ್ಷದಲ್ಲಿ ಸಾವಿರಾರು ಮಂದಿಗೆ ಸಿಕ್ಕಿದೆ ವಿದ್ಯಾಭ್ಯಾಸ