ಮಂಗಳೂರು: ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ದಾಸಕೋಡಿ ನಿವಾಸಿ ನಾರಾಯಣ ನಾಯ್ಕ್ (75 ) ಇಂದು ಸಂಜೆ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವ್ಯಕ್ತಿ 10-12 ವರ್ಷಗಳಿಂದ ಅಪಸ್ಮಾರ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗ್ತಿದ್ದು, ಸುಮಾರು ವರ್ಷಗಳಿಂದ ಔಷಧಿಯನ್ನು ಕೊಡಿಸಿದ್ದರೂ ಗುಣಮುಖರಾಗಿರಲಿಲ್ಲ. ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಬುಧವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಮೃತರ ಪತ್ನಿ 2 ವರ್ಷದ ಹಿಂದೆ ತೀರಿಕೊಂಡಿದ್ದರೆಂದು ತಿಳಿದು ಬಂದಿದ್ದು, ಇವರು 5 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷರಾದ ಶ್ರೀಧರ್, ಹೆಡ್ ಕಾನ್ಸ್ಟೇಬಲ್ ಜಯರಾಮ ಭೇಟಿ ನೀಡಿ ಮೃತದೇಹದ ಮಹಜರು ಮಾಡಿ ಮರಣೋತ್ತರ ಪರೀಕ್ಷೆಗೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಈ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.