ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಉಪವಿಭಾಗದಿಂದ ಶನಿವಾರ 1,520 ಮಂದಿ ಉತ್ತರ ಪ್ರದೇಶದ ಕಾರ್ಮಿಕರನ್ನು ತಮ್ಮ ತವರು ಊರುಗಳಿಗೆ ಶ್ರಮಿಕ್ ರೈಲಿನಲ್ಲಿ ಕಳುಹಿಸಲಾಯಿತು. .
ಮಾರ್ಚ್ 12ರಂದು ಬಿಹಾರದ 1,428 ಕಾರ್ಮಿಕರು ತೆರಳಿದ್ದು, ಇದುವರೆಗೂ ಪುತ್ತೂರು ಉಪವಿಭಾಗದಿಂದ ಒಟ್ಟು 2,948 ಕಾರ್ಮಿಕರು ತೆರಳಿದಂತಾಗಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ, ಸುಬ್ರಹ್ಮಣ್ಯ, ಕಡಬ ಪ್ರದೇಶಗಳಲ್ಲಿ ದುಡಿಯುತ್ತಿದ್ದರು. ಕಟ್ಟಡ ನಿರ್ಮಾಣ, ಸಿಮೆಂಟ್ ಸಾಗಣೆಯಂತಹ ಶ್ರಮದ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು.
ಹೆಚ್ಚುವರಿ ಎಸ್ಪಿ ವಿಕ್ರಂ ಅಮ್ಟೆ, ಪುತ್ತೂರು ಉಪವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಡಿವೈಎಸ್ಪಿ ದಿನಕರ್ ಶೆಟ್ಟಿ, ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು, ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತಿ, ಕಡಬ ತಹಶೀಲ್ದಾರ್ ಜಾನ್‌ಪ್ರಕಾಶ್, ಅನಂತಶಂಕರ ಸುಳ್ಯ ಜತೆ ಕಂದಾಯ ಇಲಾಖೆ ಸಿಬಂದಿ, ಕೆಎಸ್ಆರ್ಟಿಸಿ, ರೈಲ್ವೆ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಸಹಕಾರದಲ್ಲಿ 1,520 ವಲಸಿಗ ಕಾರ್ಮಿಕರಿಗೆ ಸ್ಕ್ರೀನಿಂಗ್ ಹಾಗೂ ವೈದ್ಯಕೀಯ ತಪಾಸಣೆ ನಡೆಸಿ ಕಳುಹಿಸಿಕೊಡಲಾಯಿತು.
ಪುತ್ತೂರು ಸುತ್ತಲಿನ ಭಾಗಗಳಿಂದ 42 ಕೆಎಸ್ಆರ್ಟಿಸಿ ಬಸ್ಗಳಲ್ಲಿ ರೈಲ್ವೆ ನಿಲ್ದಾಣಕ್ಕೆ ಕರೆತಂದು ಶ್ರಮಿಕ್ ರೈಲಿನಲ್ಲಿ ಉತ್ತರ ಪ್ರದೇಶಕ್ಕೆ ಕಳುಹಿಸಲಾಯಿತು.
ಕುಕ್ಕೆ ಸುಬ್ರಹ್ಮಣ್ಯ ದೇವಳ ಮತ್ತು ಪುತ್ತೂರು ಮಹಾಲಿಂಗೇಶ್ವರ ದೇವಳದ ವತಿಯಿಂದ ಊಟ, ಆಹಾರದ ಕಿಟ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. ಪುತ್ತೂರು ಕಬಕ ರೈಲ್ವೆ ನಿಲ್ದಾಣದಿಂದ ಹೊರಟ ಶ್ರಮಿಕ ರೈಲು ಅರಸೀಕೆರೆ, ಗುಂತಕಲ್, ನಾಗಪುರ, ಝಾನ್ಸಿ, ಲಕ್ನೋ ಮೂಲಕ ಸಂಚರಿಸಿ 52 ಗಂಟೆಗಳಲ್ಲಿ ಉತ್ತರಪ್ರದೇಶದ ಅಂತಿನ ನಿಲ್ದಾಣ ತಲುಪಲಿದೆ ಎಂದು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಹಿರಿಯ ಟಿಕೆಟ್ ನಿರೀಕ್ಷಕ ವಿಠಲ್ ನಾಯಕ್ ಹೇಳಿದರು.